ತಿರುವನಂತಪುರಂ: ಬೃಹತ್ ಕ್ರಿಸ್ಟೋಕರೆನ್ಸಿ ವಂಚನೆಗಾಗಿ ಅಮೆರಿಕದಲ್ಲಿ ವಾಂಟೆಡ್ ಕ್ರಿಮಿನಲ್ ಆಗಿರುವ ಲಿಥುವೇನಿಯಾದ ವ್ಯಕ್ತಿಯೊಬ್ಬನನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ (ಮಾ.12) ತಿಳಿಸಿದ್ದಾರೆ.
ಆರೋಪಿ ಅಲೆಕ್ಸೆಜ್ ಬೆಸಿಯೊಕೊವ್ ಎಂಬಾತನೇ ಬಂಧಿತ. ಈತ ರಾನ್ಸಮ್‌ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ‘ಗ್ಯಾರಂಟೆಕ್ಸ್’ ಎಂಬ ಕ್ರಿಸ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದಾನೆಂದು ಆರೋಪಿಸಲಾಗಿದೆ.
ಬೆಸಿಯೊಕೊವ್ ದೇಶದಿಂದ ಪಲಾಯನ ಮಾಡಲು ಯೋಜಿಸುತ್ತಿದ್ದಾಗ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕಾದ ಸೀಕ್ರೆಟ್ ಸರ್ವಿಸ್ ದಾಖಲೆಗಳ ಪ್ರಕಾರ, ಬೆಸಿಯೊಕೊವ್ ಸುಮಾರು ಆರು ವರ್ಷಗಳ ಅವಧಿಯಲ್ಲಿ ಗ್ಯಾರಂಟೆಕ್ಸ್ ಅನ್ನು ನಿಯಂತ್ರಿಸಿ, ನಿರ್ವಹಿಸುತ್ತಿದ್ದ ಎಂದು ಆರೋಪಿಸಲಾಗಿದೆ, ಇದು ಅಂತಾರಾಷ್ಟ್ರೀಯ ಅಪರಾಧ ಸಂಘಟನೆಗಳು (ಭಯೋತ್ಪಾದಕ ಸಂಘಟನೆಗಳು ಸೇರಿದಂತೆ) ಕನಿಷ್ಠ $96 ಬಿಲಿಯನ್ ಕ್ರಿಸ್ಟೋಕರೆನ್ಸಿ ವಹಿವಾಟುಗಳಲ್ಲಿ ಹಣ ವರ್ಗಾವಣೆಗೆ ಅನುಕೂಲ ಮಾಡಿಕೊಟ್ಟಿದೆ. ಅಲ್ಲದೆ ಎಲ್ಲಾ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಅಮೆರಿಕದ ಅಧಿಕಾರಿಗಳ ಕೋರಿಕೆಯ ಮೇರೆಗೆ ವಿದೇಶಾಂಗ ಸಚಿವಾಲಯವು ತಾತ್ಕಾಲಿಕ ಬಂಧನ ವಾರಂಟ್ ಸ್ವೀಕರಿಸಿತು. ಇದರ ನಂತರ, ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಕೇರಳ ಪೊಲೀಸರ ಜಂಟಿ ಪ್ರಯತ್ನದಿಂದ ಕೇರಳದ ತಿರುವನಂತಪುರದಲ್ಲಿ ಬೆಸ್ಸಿಯೊಕೊವ್ ಅವರನ್ನು ಬಂಧಿಸಲಾಗಿದೆ.
ಅವರನ್ನು ಶೀಘ್ರದಲ್ಲಿಯೇ ಪಟಿಯಾಲಾ ಕೋರ್ಟ್ ನಲ್ಲಿ ಹಾಜರುಪಡಿಸಲಾಗುವುದು ಎಂದು ವರದಿ ಹೇಳಿದೆ.