ಎಸ್.ಎಲ್. ಭೈರಪ್ಪ ಅವರು ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.ಇಂದು ಬೆಳಿಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್.ಎಲ್. ಭೈರಪ್ಪ (94) ಅವರು ಬುಧವಾರ ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಎಸ್.ಎಲ್. ಭೈರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ. ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಭೈರಪ್ಪ ಅವರು, ಕನ್ನಡ ಕಾದಂಬರಿಗಳ ಮೂಲಕ ಓದುಗರ ಹೃದಯದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದರು. ಅವರ ಕೃತಿಗಳು ತತ್ತ್ವಶಾಸ್ತ್ರ, ಇತಿಹಾಸ ಮತ್ತು ಸಮಾಜದ ನೈಜ ಚಿತ್ರಣ ಒಳಗೊಂಡಿವೆ.
ಭೈರಪ್ಪ ಅವರ ನಿಧನದಿಂದ ಸಾಹಿತ್ಯ ಲೋಕದಲ್ಲಿ ಅಪಾರ ನಷ್ಟ ಉಂಟಾಗಿದೆ ಎಂದು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತೇಶಿವರ ಲಿಂಗಣ್ಣಯ್ಯ ಬೈರಪ್ಪ (ಎಸ್.ಎಲ್.ಭೈರಪ್ಪ) ಅವರು 20 ಆಗಸ್ಟ್ 1931 ರಂದು ಚನ್ನರಾಯಪಟ್ಟಣದಲ್ಲಿ ಜನಿಸಿದ್ದರು. ಕಾದಂಬರಿಕಾರರಾಗಿ ತತ್ವಜ್ಞಾನಿ ಮತ್ತು ಲೇಖಕರಾಗಿ ಸಾಹಿತ್ಯ ಕೃಷಿ ಮಾಡಿದ್ದ ಅವರ ಹಲವು ಕೃತಿಗಳು ಭಾರತೀಯ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಎಸ್. ಎಲ್. ಭೈರಪ್ಪ ಅವರು ಒಟ್ಟು ಇಪ್ಪತ್ತನಾಲ್ಕು ಕಾದಂಬರಿಗಳನ್ನು ಬರೆದಿದ್ದಾರೆ. ಪ್ರಮುಖ ಕೃತಿಗಳಲ್ಲಿ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಪರ್ವ, ಸಾರ್ಥ, ಆವರಣವೂ ಸೇರಿವೆ.
ಭೈರಪ್ಪ ಕೃತಿಗಳು ಯಾವುವು? ಭೀಮಕಾಯ (1958), ಬೆಳಕು ಮೂಡಿತು, ಧರ್ಮಶ್ರೀ (1961), ದೂರ ಸರಿದರು (1962), ಮತದಾನ (1965), ವಂಶವೃಕ್ಷ (1965), ಜಲಪಾತ (1967), ನಾಯಿ ನೆರಳು (1968), ತಬ್ಬಲಿಯು ನೀನಾದೆ ಮಗನೆ (1968), ಗೃಹಭಂಗ (1970), ನಿರಾಕರಣ (1971), ಗ್ರಹಣ (1972), ದಾಟು (1973), ಅನ್ವೇಷಣ (1976), ಪರ್ವ (1979), ನೆಲೆ (1983), ಸಾಕ್ಷಿ (1986), ಅಂಚು (1990), ತಂತು (1993), ಸಾರ್ಥ (1998), ಮಂದ್ರ (2001), ಆವರಣ (2007), ಕವಲು (2010), ಯಾನ (2014), ಉತ್ತರಕಾಂಡ (2017) ಕೃತಿ ಪ್ರಕಟವಾಗಿವೆ. ಭೈರಪ್ಪ ಅವರ ಸಾಹಿತ್ಯ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ 2023 ರಲ್ಲಿ ಪದ್ಮಭೂಷಣ, ಪದ್ಮಶ್ರೀ (2016), ಸರಸ್ವತಿ ಸಮ್ಮಾನ್ (2010), ಸಾಹಿತ್ಯ ಅಕಾಡೆಮಿ ಫೆಲೋಶಿಪ್ (2015), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975) ನೀಡಿ ಸನ್ಮಾನಿಸಿತ್ತು.