ಬೆಂಗಳೂರು: 5 ಮತ್ತು 8ನೇ ತರಗತಿ ಮಾದರಿಯಲ್ಲೇ 9ನೇ ತರಗತಿಗೂ ಮೌಲ್ಯಾಂಕನ ಪರೀಕ್ಷೆ ಹಾಗೂ ಪ್ರಥಮ ಪಿಯುಗೆ ವಾರ್ಷಿಕ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
ಇದುವರೆಗೂ ಪ್ರಥಮ ಪಿಯುಗೆ ಆಯಾ ಜಿಲ್ಲಾಮಟ್ಟದಲ್ಲೇ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇದೇ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಜಿಲ್ಲಾ ಉಪ ನಿರ್ದೇಶಕರ ಮೂಲಕ ಎಲ್ಲ ಕಾಲೇಜುಗಳಿಗೂ ಕಳುಹಿಸಿಕೊಡುತ್ತದೆ. ವಿದ್ಯಾರ್ಥಿಗಳು ತಾವು ಓದುತ್ತಿರುವ ಕಾಲೇಜಿನಲ್ಲೇ ಪರೀಕ್ಷೆ ಬರೆಯಲು ಹಾಗೂ ಅದೇ ಕಾಲೇಜಿನ ಉಪನ್ಯಾಸಕರೇ ಮೌಲ್ಯಮಾಪನ ಮಾಡಲು ಅವಕಾಶ ನೀಡಲಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಕಾಲೇಜು ಹಂತದಲ್ಲೇ ಪೂರಕ ಪರೀಕ್ಷೆ ನಡೆಸಲು ಸಮ್ಮತಿಸಲಾಗಿದೆ.
ಕಳೆದ ಶೈಕ್ಷಣಿಕ ಸಾಲಿನಿಂದ 5 ಮತ್ತು 8ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲಾಗಿತ್ತು. ಅದನ್ನು 9ನೇ ತರಗತಿಗೆ ವಿಸ್ತರಿಸಲಾಗಿದೆ. ಆಯಾ ಶಾಲೆಗಳಲ್ಲೇ ಪರೀಕ್ಷೆ ನಡೆಸಿದರೂ, ಸಮೀಪದ ಇತರೆ ಶಾಲೆಯ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರಾಗಿ ನೇಮಿಸಿಕೊಳ್ಳಲು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ತಾಲ್ಲೂಕು ಹಂತದಲ್ಲಿ ಕೈಗೊಳ್ಳಲು ಸೂಚಿಸಲಾಗಿದೆ. ಆದರೆ, ಯಾರನ್ನೂ ಅನುತ್ತೀರ್ಣಗೊಳಿಸಬಾರದು ಎಂಬ ಷರತ್ತು ವಿಧಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಕಲಿಕಾಮಟ್ಟ, ಹಿಂದುಳಿದಿರುವಿಕೆ ಗುರುತಿಸಲು ಹಾಗೂ ಕಲಿಕೆಯಲ್ಲಿ ಹಿಂದುಳಿದವರಿಗೆ ಅಗತ್ಯ ಬೋಧನೆಗೆ ಅವಕಾಶ ಕಲ್ಪಿಸಲಷ್ಟೆ ಮೌಲ್ಯಾಂಕನ ಮಾಡಲಾಗುತ್ತಿದೆ ಎಂದು ವಿವರಿಸಲಾಗಿದೆ.
9ನೇ ತರಗತಿ ಹಾಗೂ ಪ್ರಥಮ ಪಿಯು ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಅಗತ್ಯವಾದ ಅನುದಾನವನ್ನು ಪರೀಕ್ಷಾ ಮಂಡಳಿಯೇ ಭರಿಸಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೇಳಿದೆ.