ದಕ್ಷಿಣ ಆಫ್ರಿಕಾದ ನ್ಯಾಯಾಲಯವು 42 ವಿವಿಧ ಅತ್ಯಾಚಾರ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ 9 ವರ್ಷಗಳಲ್ಲಿ 90 ಹೆಣ್ಣುಮಕ್ಕಳ ಮೇಲೆ ಈತ ಅತ್ಯಾಚಾರವೆಸಗಿದ್ದಾನೆ. ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ 42 ಪ್ರಕರಣಗಳಲ್ಲಿ ಈ ವ್ಯಕ್ತಿ ಶಿಕ್ಷೆಗೆ ಗುರಿಯಾಗಿದ್ದಾನೆ. ತಪ್ಪಿತಸ್ಥ ವ್ಯಕ್ತಿ ಎಲೆಕ್ಟ್ರಿಷಿಯನ್‌ನಂತೆ ಮನೆಗಳಿಗೆ ನುಗ್ಗಿ ಅನೇಕ ಮಹಿಳೆಯರು ಮತ್ತು ಹುಡುಗಿಯರ ಜೀವನ ಹಾಳು ಮಾಡಿದ್ದಾನೆ. ಆರೋಪಿಯನ್ನು ನಕೋಸಿನತಿ ಫಕತಿ ಎಂದು ಗುರುತಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. 40 ವರ್ಷದ ಅಪರಾಧಿ 2012 ರಿಂದ 2021 ರವರೆಗೆ ಅಪರಾಧಗಳನ್ನು ಎಸಗಿದ್ದಾನೆ. ಜೋಹಾನ್ಸ್‌ಬರ್ಗ್ ಮತ್ತು ನೆರೆಯ ಎಕುರ್ಹುಲೆನಿಯಲ್ಲಿ ಒಂಟಿ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕೃತ್ಯವೆಸಗುತ್ತಿದ್ದ. ಆರೋಪಿ ವಿದ್ಯಾರ್ಥಿನಿಯರಿಗೆ ಹಿಂಸಾತ್ಮಕ ಮತ್ತು ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದ, ಮನೆಯಲ್ಲಿ ಒಬ್ಬಂಟಿಯಾಗಿರುವ ಹುಡುಗಿಯರು, ಮಹಿಳೆಯರನ್ನು ಈತ ಟಾರ್ಗೆಟ್ ಮಾಡುತ್ತಿದ್ದ, ಆರೋಪಿ ತನ್ನ ಕುಟುಂಬದ ಸದಸ್ಯರ ಎದುರು ಕೂಡ ಹಲವು ಕೃತ್ಯ ಎಸಗಿದ್ದಾನೆ, ಈತ ಕರುಣೆಗೆ ಯೋಗ್ಯನಲ್ಲ, ಅಮಾಯಕ ಮತ್ತು ಅಸಹಾಯಕತೆಯ ಲಾಭ ಪಡೆದಿದ್ದಾನೆ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಹಲವು ದಿನಗಳಿಂದ ಮಕ್ಕಳ ಮೇಲೆ ಕಣ್ಣಿಟ್ಟಿದ್ದ ಈತ ಶಾಲೆಗೆ ಹೋಗುವಾಗ ಮಕ್ಕಳನ್ನು ಕಿಡ್ನಾಪ್ ಮಾಡಿ ತನ್ನ ಪ್ಲಾನ್ ನಡೆಸುತ್ತಿದ್ದ. ದಕ್ಷಿಣ ಆಫ್ರಿಕಾದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಪ್ರಕರಣಗಳಲ್ಲಿ ಈಗಾಗಲೇ ಭಾರಿ ಹೆಚ್ಚಳ ಕಂಡುಬಂದಿದೆ, ಆದ್ದರಿಂದ ನ್ಯಾಯಾಲಯದ ಈ ನಿರ್ಧಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
