ನವದೆಹಲಿ : ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದವನ್ನು ಅವರು ಭಾರತ ಮತ್ತು ಅಮೆರಿಕ ಎರಡೂ ದೇಶಗಳ ಪಾಲಿಗೆ ‘ಗ್ರೇಟ್ ನ್ಯೂಸ್’ ಎಂದು ಬಣ್ಣಿಸಿದ್ದಾರೆ.
ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪೀಯೂಷ್ ಗೋಯಲ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಮಾಹಿತಿಯನ್ನು ಪ್ರಧಾನಿ ಮೋದಿ ಶೇರ್ ಮಾಡಿದ್ದು, ಇದು ಅತ್ಯಂತ ಮಹತ್ವದ ಮತ್ತು ದೂರದೃಷ್ಟಿಯ ಒಪ್ಪಂದವಾಗಿದೆ ಎಂದು ತಿಳಿಸಿದ್ದಾರೆ. ಈ ಒಪ್ಪಂದದಿಂದ ಭಾರತ ಮತ್ತು ಅಮೆರಿಕ ಎರಡೂ ರಾಷ್ಟ್ರಗಳಿಗೆ ಮಹತ್ತರ ಲಾಭವಾಗಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಎರಡು ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೋರಿದ ವೈಯಕ್ತಿಕ ಬದ್ಧತೆಗೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಈ ವ್ಯಾಪಾರ ಒಪ್ಪಂದವು ಭಾರತ-ಅಮೆರಿಕ ನಡುವಿನ ಗಾಢವಾದ ಬಾಂಧವ್ಯ, ಪರಸ್ಪರ ನಂಬಿಕೆ ಮತ್ತು ಸಹಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಒಪ್ಪಂದವು ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಮತ್ತಷ್ಟು ಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಈ ಒಪ್ಪಂದದಿಂದ ಭಾರತೀಯ ರೈತರು, ಉದ್ಯಮಿಗಳು, ಎಂಎಸ್‌ಎಂಇಗಳು, ಸ್ಟಾರ್ಟ್‌ಅಪ್ ಸಂಸ್ಥೆಗಳು ಹಾಗೂ ಮೀನುಗಾರರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ನಿರ್ಮಾಣವಾಗಲಿವೆ ಎಂದು ತಿಳಿಸಿದ್ದಾರೆ.
ಎರಡೂ ದೇಶಗಳು ಹೊಸ ಆವಿಷ್ಕಾರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಈ ಒಪ್ಪಂದದ ಮೂಲಕ ಹೂಡಿಕೆ ಮತ್ತು ತಂತ್ರಜ್ಞಾನ ಸಹಭಾಗಿತ್ವ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಮಟ್ಟದಲ್ಲಿ ನಂಬಿಕಸ್ಥ ಮತ್ತು ಬಲಿಷ್ಠ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಈ ಒಪ್ಪಂದ ನೆರವಾಗಲಿದೆ. ಇದು ವಿಶ್ವ ಆರ್ಥಿಕ ವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ. ಮಧ್ಯಂತರ ವ್ಯಾಪಾರ ಒಪ್ಪಂದದ ಪ್ರಕಾರ, ಅಮೆರಿಕವು ಭಾರತದ ಮೇಲಿನ ಆಮದು ಸುಂಕವನ್ನು ಶೇ.25ರಿಂದ ಶೇ.18ಕ್ಕೆ ಇಳಿಸಲಿದೆ. ಇದರಿಂದ ಭಾರತದ ಅನೇಕ ಉತ್ಪನ್ನಗಳ ರಫ್ತು ಹೆಚ್ಚಲು ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.
‘ವಿಕಸಿತ ಭಾರತ’ದ ಗುರಿಯತ್ತ ದೇಶ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಜನರನ್ನು ಸಶಕ್ತಗೊಳಿಸುವ ಹಾಗೂ ದೂರದೃಷ್ಟಿಯ ಜಾಗತಿಕ ಸಹಭಾಗಿತ್ವಗಳನ್ನು ಬೆಳೆಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
































