ಹಾಸನ : ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಈ ಸಾಲಿನ ಪರೀಕ್ಷೆಯಲ್ಲಿ ಸಕಲೇಶಪುರ ಪಟ್ಟಣದ ಮಲ್ಲಿಕಾರ್ಜುನನಗರದ ನಿವಾಸಿ ಕೆ.ಎಸ್.ಧನ್ಯ 982ನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಧನ್ಯ ಸಾಂಬಾರ ಮಂಡಳಿಯ ನಿವೃತ್ತ ಸಹಾಯಕ ನಿರ್ದೇಶಕ ಟಿ. ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಹಿರಿಯ ಶಿರಸ್ತೇದಾರ್ ಪಿ. ವಿಜಯಕುಮಾರಿ ದಂಪತಿಯ ಪುತ್ರಿಯಾಗಿದ್ದಾರೆ. ಈ ಹಿಂದೆ ಮೂರು ಸಲ ಯುಪಿಎಸ್ಸಿ ಬರೆದರೂ ಮೊದಲ ಎರಡು ಬಾರಿ ಪ್ರಿಲಿಮ್ಸ್ ಕೂಡ ಪಾಸ್ ಆಗಿರಲಿಲ್ಲ. ಇದೀಗ ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. ಐದನೇ ತರಗತಿವರೆಗೆ ಸಕಲೇಶಪುರ ಪಟ್ಟಣದ ರೋಟರಿ ಆಂಗ್ಲ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಧನ್ಯ, 6ರಿಂದ 12ನೇ ತರಗತಿವರೆಗೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು.
ನಿಟ್ಟೆ ತಾಂತ್ರಿಕ ಶಿಕ್ಷಣ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಇ ಅಂಡ್ ವೈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಗ್ರಂಥಾಲಯಗಳ ಪುಸ್ತಕಗಳನ್ನು ಅಧ್ಯಯನ ಮಾಡಿಯೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.
ಎರಡು ಬಾರಿ ಬರೆದರೂ, ಪಾಸಾಗಿರಲಿಲ್ಲ. 2025ರಲ್ಲಿ ಮೂರನೇ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.