ಬೆಂಗಳೂರು: ಸ್ವಯಂ ಕೃಷಿ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದ ಉದ್ಯಮಿ ವೀರೇಂದ್ರ ಬಾಬು ನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿರುವುದಾಗಿ ವೀರೇಂದ್ರ ಬಾಬು ಮೇಲೆ ಕೇಸು ದಾಖಲಾಗಿತ್ತು. ಮಹಿಳೆಯ ಮೇಲಿನ ಅತ್ಯಾಚಾರದ ಆರೋಪದಲ್ಲಿ ಬಂಧಿಸಲಾಗಿದೆ.
ಕಳೆದ 2021ರಲ್ಲಿ ಪರಿಚಿತ ಮಹಿಳೆಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಲ್ಲೇ, ಅತ್ಯಾಚಾರ ಮಾಡಿದ್ದನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ ಎನ್ನುವ ಆರೋಪವೂ ಬಾಬು ಮೇಲಿದೆ. ಜೊತೆಗೆ ಮಹಿಳೆಗೆ ಬೆದರಿಕೆವೊಡ್ಡಿ 15 ಲಕ್ಷ ಹಣ ಪೀಕಿದ್ದ ಎನ್ನಲಾಗುತ್ತಿದೆ. ಹಣ ನೀಡದಿದ್ದರೆ ವಿಡಿಯೋ ರಿಲೀಸ್ ಮಾಡೋದಾಗಿ ಹೇಳಿದ್ದನಂತೆ.
ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಕೆ ಹಾಕಿದಾಗ ಆ ಮಹಿಳೆ ಒಡವೆ ಮಾರಿ ಹಣ ಕೊಟ್ಟಿದ್ದರು. ಆದರೂ, ಬಾಬು ಮತ್ತೆ ಮತ್ತೆ ಹಣ ಕೇಳುವ ಪರಿಪಾಠ ಬೆಳೆಸಿಕೊಂಡಿದ್ದ. ಕಳೆದ ಜುಲೈ 30 ರಂದು ಮತ್ತೆ ಮಹಿಳೆಯನ್ನು ಕರೆಯಿಸಿ ಬೆದರಿಕೆ ಕೂಡ ಹಾಕಿದ್ದನಂತೆ. ಮಹಿಳೆಯನ್ನ ಕಾರಿನಲ್ಲಿ ಸುತ್ತಾಡಿಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡಿರೋದಾಗಿ ಆರೋಪ ಮಾಡಲಾಗಿದೆ.
ಗನ್ ಪಾಯಿಂಟ್ ನಲ್ಲಿ ಗುರಿ ಇಟ್ಟು ಬೆದರಿಸಿದ್ದಾರೆಂದು ದೂರಲಾಗಿದೆ. ಘಟನೆಗೆ ಸಂಬಂಧಿಸದಂತೆ ಬಾಬು ಹಾಗೂ ಸ್ನೇಹಿತರ ಮೇಲೆ ಎಫ್ಐಆರ್ ದಾಖಲಾಗಿತ್ತು. ಆರೋಪಿಯನ್ನು ಅರೆಸ್ಟ್ ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.