ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಸತ್ತು ಸಮಿತಿ ಸಭೆಯಲ್ಲಿ ಹೊಸದಾದ ಕೇಂದ್ರ ಸರ್ಕಾರದ ಯೋಜನೆ ‘ಪಿಎಂ ವಿಶ್ವಕರ್ಮ’ಕ್ಕೆ ಅನುಮೋದನೆ ನೀಡಲಾಗಿದೆ. ಹಣಕಾಸು ವರ್ಷ 2023-24 ರಿಂದ ಹಣಕಾಸು ವರ್ಷ 2027-28 ರ ಐದು ವರ್ಷಗಳ ಅವಧಿಯ 13,000 ಕೋಟಿ ರೂಪಾಯಿಯ ಯೋಜನೆ ಇದಾಗಿದೆ.
77ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಆವರಣದಿಂದ ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಈ ಯೋಜನೆಯನ್ನು ಮುಖ್ಯವಾಗಿ ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ.
“ಕುಶಲಕರ್ಮಿಗಳು ಮತ್ತು ಕಲೆಗಾರರು ತಮ್ಮ ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಗುರು-ಶಿಷ್ಯ ಪರಂಪರೆ ಅಥವಾ ಕುಟುಂಬ ಆಧಾರಿತ ಸಾಂಪ್ರದಾಯಿಕ ಕೌಶಲ್ಯಗಳನ್ನು ಬಲಪಡಿಸುವ ಮತ್ತು ಪೋಷಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ,” ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.
“ಈ ಯೋಜನೆಯು ಕುಶಲಕರ್ಮಿಗಳ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳ ಉತ್ಪನ್ನಗಳು ಮತ್ತು ಸೇವೆಗಳ ವ್ಯಾಪ್ತಿಯನ್ನು ದೇಶೀಯ ಮತ್ತು ಜಾಗತಿಕವಾಗಿ ವಿಸ್ತರಣೆ ಮಾಡುವ ಉದ್ದೇಶವನ್ನು ಕೂಡಾ ಈ ಯೋಜನೆ ಹೊಂದಿದೆ,” ಎಂದು ಸೇರಿಸಲಾಗಿದೆ. ವಿಶ್ವಕರ್ಮ ಯೋಜನೆ ಬಗ್ಗೆ ಪ್ರಧಾನಿ ಮೋದಿ “ಮುಂದಿನ ದಿನಗಳಲ್ಲಿ, ನಾವು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಒಂದು ಯೋಜನೆಯನ್ನು ಪ್ರಾರಂಭಿಸುತ್ತೇವೆ. ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ, ವಿಶೇಷವಾಗಿ ಒಬಿಸಿ ಸಮುದಾಯಕ್ಕೆ ಸೇರಿದವರಿಗೆ ಪ್ರಯೋಜನ ಲಭ್ಯವಾಗುತ್ತದೆ,” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. “ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಲಾಂಡ್ರಿ ಕಾರ್ಮಿಕರು, ಕ್ಷೌರಿಕರು ಮತ್ತು ಅಂತಹ ಕುಟುಂಬಗಳನ್ನು ವಿಶ್ವಕರ್ಮ ಯೋಜನೆ ಮೂಲಕ ಸಬಲೀಕರಣಗೊಳಿಸಲಾಗುವುದು. ಇದು ಸುಮಾರು 13-15 ಸಾವಿರ ಕೋಟಿ ರೂಪಾಯಿಗಳ ಹಂಚಿಕೆಯೊಂದಿಗೆ ಆರಂಭವಾಗುವ ಯೋಜನೆಯಾಗಿದೆ,” ಎಂದು ಪ್ರಧಾನಿ ಹೇಳಿದ್ದಾರೆ. ವಿಶ್ವಕರ್ಮ ಯೋಜನೆ ಮಾಹಿತಿ ‘ಪಿಎಂ ವಿಶ್ವಕರ್ಮ’ ಯೋಜನೆಯಡಿ ಕುಶಲಕರ್ಮಿಗಳು ಮತ್ತು ಕಲೆಗಾರರು ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ, 1 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ (ಮೊದಲ ಭಾಗ) ಮತ್ತು 2 ಲಕ್ಷ ರೂಪಾಯಿ (ಎರಡನೇ ಭಾಗ) ಶೇಕಡ 5ರಷ್ಟು ಬಡ್ಡಿದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ.
ಹೆಚ್ಚಿನ ಕಲೆ ಕಲಿಯಲು, ಬೇಕಾದ ವಸ್ತುಗಳಿಗೆ ಪ್ರೋತ್ಸಾಹ ನಿಧಿ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಈ ಯೋಜನೆಯು ಒದಗಿಸುತ್ತದೆ. ಮಾಹಿತಿಯ ಪ್ರಕಾರ ಹದಿನೆಂಟು ಸಾಂಪ್ರದಾಯಿಕ ವಹಿವಾಟುಗಳನ್ನು ಈ ಪಿಎಂ ವಿಶ್ವಕರ್ಮ ಅಡಿಯಲ್ಲಿ ಒಳಗೊಳ್ಳುತ್ತದೆ.
ಆಧುನಿಕ ಉಪಕರಣಗಳನ್ನು ಖರೀದಿಸಲು ಈ ಕುಶಲಕರ್ಮಿಗಳಿಗೆ 15,000 ರೂಪಾಯಿವರೆಗೆ ಬೆಂಬಲವನ್ನು ನೀಡಲಾಗುತ್ತದೆ. ಮೊದಲ ವರ್ಷದಲ್ಲಿ ಐದು ಲಕ್ಷ ಕುಟುಂಬಗಳು ಮತ್ತು 2024 ರಿಂದ 28 ರವರೆಗೆ ಐದು ವರ್ಷಗಳಲ್ಲಿ ಒಟ್ಟು 30 ಲಕ್ಷ ಕುಟುಂಬಗಳಿಗೆ ರಕ್ಷಣೆ ನೀಡಲಾಗುವುದು ಎಂದು ಕೂಡಾ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.