ಬೆಂಗಳೂರು: ರಾಜ್ಯ ಸರ್ಕಾರದ ಹಣಕಾಸು ಸಚಿವಾಲಯದ ಅಡಿ ಕಾರ್ಯನಿರ್ವಹಿಸು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ 230 ಗ್ರೂಪ್ ಸಿ ವಾಣಿಜ್ಯ ತೆರಿಗೆ ಪರಿವೀಕ್ಷಕರು (Commercial Tax Inspectors-CTI) ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಅಯೋಗವು (ಕೆಪಿಎಸ್ಸಿ) ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನ. ಆಯೋಗದ ಅಧಿಕೃತ ಜಾಲತಾಣ www.kpsc.kar.nic.in ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹ 600, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹ 50 ಶುಲ್ಕ ನಿಗದಿಪಡಿಸಲಾಗಿದೆ. ಪ್ರವರ್ಗ 1, ಎಸ್ಸಿ, ಎಸ್ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. UPI ಮೂಲಕವೂ ಶುಲ್ಕ ಪಾವತಿಸಬಹುದು.
ಶೈಕ್ಷಣಿಕ ಅರ್ಹತೆ
ಯಾವುದೇ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ವಾಣಿಜ್ಯ ಪದವಿ (ಬಿ.ಕಾಂ) ಪಾಸಾಗಿರಬೇಕು. ಬೇರೆ ಪದವಿ ಹೊಂದಿದವರು, ಅರ್ಥಶಾಸ್ತ್ರ ಅಥವಾ ಗಣಿತ ವಿಷಯವನ್ನು ಪದವಿಯ ಸೆಮಿಸ್ಟರ್ ಅಥವಾ 1 ವರ್ಷ ಅಭ್ಯಾಸ ಮಾಡಿರಬೇಕು.
ವಯೋಮಿತಿ: ಕನಿಷ್ಠ 18 ಹಾಗೂ ಗರಿಷ್ಠ 35 ಇದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ 40ರವರೆಗೂ ವಯೋಮಿತಿ ಇದೆ.
ಪರೀಕ್ಆ ದಿನಾಂಕಗಳು: ಕನ್ನಡ ಭಾಷಾ ಪರೀಕ್ಷೆಯನ್ನು ನವೆಂಬರ್ 4 ರಂದು ಹಾಗೂ ನವೆಂಬರ್ 5 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಆಯೋಗ ತೀರ್ಮಾನಿಸಿದೆ. ಇವೆರಡೂ ತಾತ್ಕಾಲಿಕವಾಗಿ ನಿಗದಿಯಾಗಿರುವ ದಿನಾಂಕಗಳಾಗಿದೆ. ನಿಖರವಾದ ದಿನಾಂಕವನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.
ಆಯ್ಕೆ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಪ್ರಮಾಣದ ಆಧಾರದಲ್ಲಿ(ಮೆರಿಟ್) ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸಂದರ್ಶನ ಪ್ರಕ್ರಿಯೆ ಇರುವುದಿಲ್ಲ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಟ ಶೇಕಡಾ 35 ಅಂಕಗಳನ್ನು ಪಡೆಯುವುದು ಕಡ್ಡಾಯ. ಅರ್ಜಿ ಸಲ್ಲಿಸುವವರು ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಇಲ್ಲದಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗೆ ಮುನ್ನ ಕೆಪಿಎಸ್ಸಿ ನಡೆಸುವ ಕನ್ನಡ ಭಾಷಾ ಪರೀಕ್ಷೆಯನ್ನು ಬರೆದು ಪಾಸ್ ಮಾಡಬೇಕು.
ಹೀಗಿರಲಿದೆ ಸ್ಪರ್ಧಾತ್ಮಕ ಪರೀಕ್ಷೆ
ಈ ಸ್ಪರ್ಧಾತ್ಮಕ ಪರೀಕ್ಷೆ ಬಹುಆಯ್ಕೆ ಮಾದರಿಯ ಎರಡು ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುತ್ತದೆ. ಎರಡೂ ಪೇಪರ್ ಗಳು ತಲಾ ಗರಿಷ್ಠ 100 ಅಂಕಗಳ 100 ಪ್ರಶ್ನೆಗಳನ್ನು ಹೊಂದಿರುತ್ತದೆ. ಅಭ್ಯರ್ಥಿಗಳು ಎರಡೂ ಪತ್ರಿಕೆಗೆ ಹಾಜರಾಗುವುದು ಕಡ್ಡಾಯ.
ನಾಲ್ಕು ತಪ್ಪು ಉತ್ತರಗಳಿಗೆ ಒಂದು ಅಂಕವನ್ನು ಕಳೆಯಲಾಗುತ್ತದೆ(ಋಣಾತ್ಮಕ ಮೌಲ್ಯಮಾಪನ). ಹಾಗಾಗಿ ಅಭ್ಯರ್ಥಿಗಳು ಯೋಚಿಸಿ ಸರಿಯಾದ ಉತ್ತರವನ್ನೇ ಗುರುತು ಮಾಡಲು ಪ್ರಯತ್ನಿಸಬೇಕು. ಈ ಸ್ಪರ್ಧಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಇರುತ್ತವೆ. ಮೊದಲ ಪತ್ರಿಕೆ ಒಂದೂವರೆ ಗಂಟೆಯದ್ದಾಗಿರುತ್ತದೆ. ಎರಡನೇ ಪತ್ರಿಕೆ ಎರಡು ಗಂಟೆ ಅವಧಿಯದ್ದು. ಮೊದಲ ಪತ್ರಿಕೆ ಬೆಳಿಗ್ಗೆ ನಡೆದರೆ, ಎರಡನೆ ಪತ್ರಿಕೆ ಮಧ್ಯಾಹ್ನ ಇರಲಿದೆ.