ಬೆಳ್ತಂಗಡಿ: ಸೌಜನ್ಯಾ ಸ್ತ್ರೀರೂಪ ತ್ಯಜಿಸಿ ಕಾಳಿ ಸ್ವರೂಪವನ್ನು ಪಡೆದಿದ್ದಾಳೆ. ಅವಳ ಆತ್ಮ ಭೀಕರ ಸ್ವರೂಪ ಪಡೆಯುವ ಮುನ್ನ ಸರಕಾರ ಎಚ್ಚೆತ್ತುಕೊಂಡು ಶೀಘ್ರ ತನಿಖೆ ನಡೆಸಿ ಅವಳ ಆತ್ಮಕ್ಕೆ ಶಾಂತಿಯನ್ನು ಕೊಡಬೇಕು ಎಂದು ಆದಿ ಚುಂಚನಗಿರಿ ಶಾಖಾ ಮಠ ಮಂಗಳೂರಿನ ಶ್ರೀ ನಿರ್ಮಲಾನಾಥನಂದ ಸ್ವಾಮೀಜಿ ಹೇಳಿದ್ದಾರೆ. ಬೆಳ್ತಂಡಿಯಲ್ಲಿ ಇಂದು ನಡೆದ ಸೌಜನ್ಯ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸತ್ಯ ನ್ಯಾಯದ ಹೋರಾಟಕ್ಕೆ ಆದಿ ಚುಂಚನಗಿರಿ ಮಠದ ಸಂಪೂರ್ಣ ಬೆಂಬಲವಿದೆ. ಎಲ್ಲರನ್ನು ಒಪ್ಪಿಕೊಂಡ, ಅಪ್ಪಿಕೊಂಡ ಮಠ ಶ್ರೀ ಆದಿ ಚುಂಚನಗಿರಿ ಮಠ. ಹಿರಿಯ ಸ್ವಾಮೀಜಿಗಳು ಮಾತನಾಡಿದ್ದಾರೆ. ಸಭೆ ಕರೆದಿದ್ದಾರೆ ಎಂದರು. ಸೌಜನ್ಯಾ ಪ್ರಕರಣದಲ್ಲಿ ಮೂರು ಅಂಶಗಳನ್ನು ಯೋಚನೆ ಮಾಡಬೇಕು. ಸಂತೋಷ ರಾವ್ಗೆ ಮರಳಿ ಜೀವನವನ್ನು ನೀಡಲು ಸಾಧ್ಯವಿಲ್ಲ. ಆದರೆ ಸರಕಾರ ಆತನ ಬದುಕಿಗೆ ಏನಾದರೂ ವ್ಯವಸ್ಥೆ ಮಾಡಬೇಕು. ಕುಸುಮಾವತಿ ಕುಟುಂಬಕ್ಕೆ ಸರಕಾರ ರಕ್ಷಣೆ ಒದಗಿಸಬೇಕು. ಅಲ್ಲದೆ 11ವರ್ಷಗಳ ಹಿಂದೆ ಸೌಜನ್ಯಾ ಮೃತದೇಹ ತಪಾಸಣೆ ಮಾಡಿರುವ ವೈದ್ಯಾಧಿಕಾರಿ ಹಾಗೂ ಪ್ರಕರಣದ ತನಿಖಾಧಿಕಾರಿಯನ್ನು ಮೊದಲು ವಿಚಾರಣೆ ಮಾಡಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆಗ ಪ್ರಕರಣದ ಹಿಂದಿನ ನಿಜಾಂಶ ಬಯಲಾಗುತ್ತದೆ ಎಂದು ಶ್ರೀ ನಿರ್ಮಲಾನಾಥನಂದ ಸ್ವಾಮೀಜಿ ಹೇಳಿದರು.