ಸೆಪ್ಟೆಂಬರ್​ 7ಕ್ಕೆ ಭಾರತ್​ ಜೋಡೋ ಯಾತ್ರೆಗೆ ಒಂದು ವರ್ಷ.. ಕಾಂಗ್ರೆಸ್​ನಿಂದ ದೇಶಾದ್ಯಂತ ಒಂದು ದಿನ ಪಾದಯಾತ್ರೆ…!

WhatsApp
Telegram
Facebook
Twitter
LinkedIn

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ತಮಿಳುನಾಡಿನ ಕನ್ಯಾಕುಮಾರಿಯಿಂದ ಹಿಡಿದು ಜಮ್ಮು ಮತ್ತು ಕಾಶ್ಮೀರದವರೆಗೆ ನಡೆಸಿದ ಭಾರತ್​ ಜೋಡೋ ಯಾತ್ರೆ ಸೆಪ್ಟೆಂಬರ್​ 7ಕ್ಕೆ ಒಂದು ವರ್ಷ ತುಂಬಲಿದೆ.

ವಾರ್ಷಿಕೋತ್ಸವದ ನೆನಪಿಗಾಗಿ ಇಡೀ ದೇಶಾದ್ಯಂತ ಅದೇ ದಿನ ಎಲ್ಲ ಜಿಲ್ಲೆಗಳಲ್ಲಿ ಯಾತ್ರೆ ಕೈಗೊಳ್ಳಲು ಕಾಂಗ್ರೆಸ್​ ನಿರ್ಧರಿಸಿದೆ. ಕಾರ್ಯಕ್ರಮದ ವಿವರಗಳನ್ನು ಪಕ್ಷವು ಇನ್ನಷ್ಟೇ ಪ್ರಕಟಿಸಬೇಕಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯವಾಗಿತ್ತು. ಈ ಸುದೀರ್ಘ ಪಾದಯಾತ್ರೆಯು ಅಜಮಾಸು 4,000 ಕಿ.ಮೀ ಸಾಗಿ ಬಂದಿತ್ತು. ಇದು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕ್ರಮಿಸಿ 130 ದಿನಗಳಿಗೂ ಹೆಚ್ಚು ಕಾಲ ನಡೆದಿತ್ತು.

ಕಾಂಗ್ರೆಸ್​ ನಾಯಕ ನಡೆಸಿದ ಈ ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಜಮ್ಮು ಮತ್ತು ಕಾಶ್ಮೀರ ಲಾಲ್​ಚೌಕ್​ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಿ ನಡೆಸಲಾಗಿದ್ದ ಯಾತ್ರೆಗೆ ಹೆಚ್ಚಿನ ಜನ ಬೆಂಬಲವೂ ಲಭ್ಯವಾಗಿತ್ತು. ಅಲ್ಲದೇ ಕರ್ನಾಟಕ, ಹಿಮಾಚಲಪ್ರದೇಶದಂತಹ ರಾಜ್ಯಗಳಲ್ಲಿ ಪ್ರಭಾವ ಬೀರಿ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟಿದೆ ಎಂದು ಪಕ್ಷ ಹೇಳಿಕೊಂಡಿದೆ.

ಹೀಗಾಗಿ ಪಕ್ಷ ಭಾರತ್​ ಜೋಡೋ ಯಾತ್ರೆ ಆರಂಭವಾದ ದಿನದ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತ ಅಂದು ಒಂದು ದಿನದ ಯಾತ್ರೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್​ ನಾಯಕರು ಮತ್ತು ಕಾರ್ಯಕರ್ತರು ಆಯಾ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಭಾರತ್​ ಜೋಡೋ 2.0 : ದಕ್ಷಿಣೋತ್ತರವಾಗಿ ರಾಹುಲ್​ ನಡೆಸಿದ್ದ ಪಾದಯಾತ್ರೆ ಬಳಿಕ ಭೇಟಿ ನೀಡದ ಪಶ್ಚಿಮ ಮತ್ತು ಪೂರ್ವ ರಾಜ್ಯಗಳಿಗೆ ಭಾರತ್​ ಜೋಡೋ ಯಾತ್ರೆ 2.0 ನಡೆಸಲು ಉದ್ದೇಶಿಸಲಾಗಿದೆ. 2ನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ಅಕ್ಟೋಬರ್​ನಲ್ಲಿ ಆರಂಭಿಸುವ ಸಾಧ್ಯತೆ ಇದೆ. ಈ ಬಗ್ಗೆ ಕಾಂಗ್ರೆಸ್‌ನಿಂದ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಗುಜರಾತ್​​ನಿಂದ ಮೇಘಾಲಯದವರೆಗೆ ಯಾತ್ರೆ ನಡೆಸಲಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬಂದಿವೆ.

ರಾಹುಲ್ ಗಾಂಧಿ ನಡೆಸಿದ ಯಾತ್ರೆಯ ಪ್ರಭಾವವು ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಪ್ರಭಾವ ಕಂಡುಬಂದಿತ್ತು. ಈ ರಾಜ್ಯಗಳಲ್ಲಿ ನಡೆಸಿದ ಯಾತ್ರೆಯಿಂದ ಮತ ಹಂಚಿಕೆಯಲ್ಲಿ ಪಕ್ಷ ಏರಿಕೆ ದಾಖಲಿಸಿದೆ. ಕರ್ನಾಟಕದಲ್ಲಿ ನಡೆದ ಯಾತ್ರೆಯು ಗುಂಡ್ಲುಪೇಟೆಯಿಂದ ಪ್ರವೇಶಿಸಿ ರಾಯಚೂರು ಗ್ರಾಮಾಂತರ ಕ್ಷೇತ್ರದಿಂದ ತೆಲಂಗಾಣಕ್ಕೆ ತೆರಳಿತ್ತು. ಇಲ್ಲಿ 22 ದಿನಗಳ ಕಾಲ 511 ಕಿ.ಮೀ ಯಾತ್ರೆ ನಡೆದಿತ್ತು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon