ಕೇಂದ್ರ ಸರ್ಕಾರವು ಜುಲೈ 20ರಂದು ಕುಚ್ಚಲಕ್ಕಿ ಮತ್ತು ಬಾಸ್ಮತಿ ಅಕ್ಕಿಯ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿ ಅಕ್ಕಿ ರಫ್ತು ನಿಷೇಧ ಆದೇಶವನ್ನು ಹೊರಡಿಸಿತ್ತು. ಇದರ ಬೆನ್ನಲ್ಲೇ ಏಷ್ಯಾದಲ್ಲಿ ಅಕ್ಕಿ ಬೆಲೆ 15 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ.
ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಅಬ್ಬರ ಜೋರಾಗಿದ್ದು, ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಇದಕ್ಕೆ ಭಾರತದ ಅಕ್ಕಿ ರಫ್ತು ನಿಷೇಧವೂ ತುಪ್ಪ ಸುರಿದಿದೆ. ಭಾರತದ ಈ ನಿರ್ಧಾರ ವಿಶ್ವ ಮಟ್ಟದಲ್ಲಿ ದೊಡ್ಡ ಮಟ್ಟಿನ ತಲ್ಲಣವನ್ನೇ ಸೃಷ್ಟಿಸಿದ್ದು, ಹಲವು ದೇಶಗಳಲ್ಲಿ ಅಕ್ಕಿಯ ಬೆಲೆ ತೀವ್ರ ಏರಿಕೆಯಾಗಿ ಕಷ್ಟವಾಗಿದೆ.
ಕೇಂದ್ರ ಸರ್ಕಾರವು ಕಳೆದ ವಾರ ಕುಚ್ಚಲಕ್ಕಿ ಮತ್ತು ಬಾಸ್ಮತಿ ಅಕ್ಕಿಯ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಇದಾದ ಬೆನ್ನಲ್ಲೇ ಏಷ್ಯಾದಲ್ಲಿ ಅಕ್ಕಿ ಬೆಲೆಗಳು 15 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಜುಲೈ 20ರಿಂದ ಅನ್ವಯವಾಗುವಂತೆ ಬಾಸ್ಮತಿಯೇತರ ಅಕ್ಕಿ ಮತ್ತು ಇತರ ಕೆಲವು ಧಾನ್ಯಗಳ ರಫ್ತಿನ ಮೇಲೆ ಕೇಂದ್ರ ನಿಷೇಧ ಹೇರಿತ್ತು. ಇದಾದ ಬಳಿಕ ಹಲವು ಬಗೆಯ ಅಕ್ಕಿಗಳಿಗೂ ಈ ನಿರ್ಬಂಧವನ್ನು ವಿಸ್ತರಿಸಲಾಗಿತ್ತು.
ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ದೇಶವಾಗಿದ್ದು, ನಂತರದ ಸ್ಥಾನದಲ್ಲಿ ಥಾಯ್ಲೆಂಡ್ ಹಾಗೂ ವಿಯೆಟ್ನಾಂನಂತಹ ದೇಶಗಳಿವೆ. ಅತಿ ದೊಡ್ಡ ರಫ್ತುದಾರ ದೇಶದ ನಿರ್ಧಾರವೀಗ ಹಲವು ದೇಶಗಳಿಗೆ ಸಂಕಷ್ಟವನ್ನು ತಂದೊಡ್ಡಿದೆ.
ಕಡಿಮೆ ಮಳೆಯಿಂದಾಗಿ ಭತ್ತ ಉತ್ಪಾದನೆಯಲ್ಲಿ ಕುಂಠಿತ
ಈ ಬಾರಿ ಮಲೆ ಕಡಿಮೆಯಾಗಿದ್ದರಿಂದ ಭತ್ತದ ಉತ್ಪಾದನೆಗೆ ನೇರಪರಿಣಾಮ ಬೀರಿತ್ತು. ಇದರಿಂದ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಗೆ ಸದ್ಯ ಟನ್‌ಗೆ 646 ಡಾಲರ್ ದರ ಇದೆ. ಸದ್ಯ ಚೀನಾದಲ್ಲಿ ಬೆಳೆ ಚೆನ್ನಾಗಿದ್ದು ಸದ್ಯಕ್ಕೆ ಅದೊಂದೇ ನಿರೀಕ್ಷೆಯಾಗಿದೆ.
ನಿರ್ಬಂಧದ ನಡುವೆಯೂ ಅಕ್ಕಿ ಬೆಲೆ ಏರಿಕೆ
ಕೇಂದ್ರ ಸರ್ಕಾರ ಅಕ್ಕಿ ರಫ್ತಿಗೆ ಹಲವು ನಿರ್ಬಂಧನೆಗಳೊಂದಿಗೆ ಆದೇಶ ಹೊರಡಿಸಿದ್ದರು, ದೇಶದಲ್ಲಿ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಒಂದು ಕೆಜಿ ಅಕ್ಕಿ ಬೆಲೆ ₹39 ಹಾಗೂ ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಅಕ್ಕಿ ಕೆಜಿಗೆ ₹ 50ರ ಹಾಗೆ ಮಾರಾಟವಾಗುತ್ತಿದೆ.