ಸೀತಾಫಲ ಸೇವನೆಯಿಂದ ಹಲವು ರೋಗಗಳಿಗೆ ಮುಕ್ತಿ – ಆರೋಗ್ಯಕ್ಕೂ ಫಲ ನೀಡುತ್ತೆ ಈ ಸೀತಾಫಲ..!

ಸೀತಾಫಲ (Sugar Apple) ಅತ್ಯಂತ ರುಚಿಯಾದ, ಆರೋಗ್ಯಕರವಾದ ಈ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವ ಸೀತಾಫಲ ರುಚಿಯಲ್ಲಿ ಬೇರೆ ಹಣ್ಣಿಗಿಂತ ಸ್ವಲ್ಪ ವಿಭಿನ್ನವಾಗಿರುತ್ತದೆ. ಅಂದಹಾಗೆ ಇದನ್ನು ಇಂಗ್ಲಿಷಿನಲ್ಲಿ ‘ಕಸ್ಟರ್ಡ್ ಆಪಲ್’ ಎಂದು ಕರೆಯುತ್ತಾರೆ.

ಈ ಹಣ್ಣನ್ನು ದೇಶಾದ್ಯಂತ ಬೆಳೆಯಲಾಗುತ್ತದೆ. ಆದರೂ ವಿಶೇಷವಾಗಿ ಈಶಾನ್ಯ ಮತ್ತು ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಕಾಣಸಿಗುತ್ತದೆ. ಸೀತಾಫಲ ನೋಡುವುದಕ್ಕೆ ಅಷ್ಟೇನೂ ಸುಂದರವಾಗಿ ಕಾಣದಿದ್ದರೂ, ಎಲೆಗಳು ಸುವಾಸನೆ ರಹಿತವಾಗಿದ್ದರೂ ಇದರಲ್ಲಿ ಅಪಾರ ಆರೋಗ್ಯ ಪ್ರಯೋಜನಗಳಿವೆ. ಅಡಿಯಿಂದ ಮುಡಿ ತನಕ ಯಾವುದೇ ಸಮಸ್ಯೆಯಿದ್ದರೂ ಸೀತಾಫಲ ಅದನ್ನು ಹೋಗಲಾಡಿಸುತ್ತದೆ. ಹೇಗೆ ಅಂತೀರಾ ಇಲ್ಲಿದೆ ನೋಡಿ ಉತ್ತರ…

ಸೀತಾಫಲದಲ್ಲಿದೆ ಭರಪೂರ ಪೌಷ್ಟಿಕಾಂಶ

ಸೀತಾಫಲದ ಪ್ರಯೋಜನಗಳನ್ನು ನಾವು ತಿಳಿಯುವ ಮೊದಲು, ಅದರಲ್ಲಿ ಪೌಷ್ಠಿಕಾಂಶ ಎಷ್ಟಿದೆ ಎಂದು ಅರ್ಥಮಾಡಿಕೊಳ್ಳೋಣ. 100 ಗ್ರಾಂ ಸೀತಾಫಲದಲ್ಲಿ 80-100 ಕ್ಯಾಲೊರಿ ಇರುತ್ತದೆ. ಸೀತಾಫಲದಲ್ಲಿ ಪ್ರೋಟೀನ್, ಕೊಬ್ಬು ಮತ್ತು ಕಬ್ಬಿಣದ ಪ್ರಮಾಣವು ಹೆಚ್ಚು ಕಂಡುಬರುತ್ತದೆ.

Advertisement

ಇದು ಥಯಾಮಿನ್, ರಿಬೋಫ್ಲಾವಿನ್ ಮತ್ತು ನಿಯಾಸಿನ್’ನಂತಹ ಕೆಲವು ಬಿ ಜೀವಸತ್ವಗಳನ್ನು ಹೊಂದಿದೆ. ಇದು ಫೈಬರ್ ಮತ್ತು ಕಾಂಪ್ಲೆಕ್ಸ್ ಕಾರ್ಬ್‌ಗಳ ಉತ್ತಮ ಮೂಲವಾಗಿದೆ. ಅಷ್ಟೇ ಅಲ್ಲ, ಸೀತಾಫಲ ಪ್ರಮುಖ ಖನಿಜಗಳಾದ ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ರಂಜಕಗಳಿಂದ ಕೂಡಿದೆ. ಇದು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ. ಇವು ಶೇ 70 ರಷ್ಟು ತೇವಾಂಶವನ್ನು ಹೊಂದಿರುವ ಹೈಡ್ರೇಟಿಂಗ್ ಹಣ್ಣುಗಳು. ಹಾಗೆಯೇ ಆಸ್ಕೋರ್ಬಿಕ್ ಆಮ್ಲ ಅಥವಾ ವಿಟಮಿನ್ ಸಿ ಯ ನೈಸರ್ಗಿಕ ಮೂಲವಾಗಿದೆ.

ಕರುಳಿನ ಆರೋಗ್ಯ ಕಾಪಾಡಲು

ಸೀತಾಫಲ ಪ್ರಮುಖವಾಗಿ ಫೈಬರ್ ಮತ್ತು ಖನಿಜಗಳಿಂದ ಸಮೃದ್ಧವಾಗಿರುವುದರಿಂದ, ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಸೀತಾಫಲ ಹಣ್ಣನ್ನು ನಿಯಮಿತವಾಗಿ ಸೇವಿಸಿದಾಗ ಇದು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೊದಲೇ ಹೇಳಿದ ಹಾಗೆ ಸೀತಾಫಲ ತಾಮ್ರ ಮತ್ತು ನಾರಿನಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುವುದರಿಂದ ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಸೀತಾಫಲ ಸೇವಿಸುವುದರಿಂದ ಮಲಬದ್ಧತೆಯ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಅತಿಸಾರ ಸಮಸ್ಯೆಯನ್ನು ಹತೋಟಿಯಲ್ಲಿ ಇಡುತ್ತದೆ. ದೇಹದೊಳಗಿನ ಹುಣ್ಣು, ಗ್ಯಾಸ್ಟ್ರಿಕ್ ತಡೆಯುತ್ತದೆ. ಸೀತಾಫಲ ಹಣ್ಣು ಡಿಟಾಕ್ಸ್ ಮಾಡುವುದರಿಂದ ಕರುಳುಗಳು ಮತ್ತು ಇತರ ಜೀರ್ಣಕಾರಿ ಅಂಗಗಳನ್ನು ಆರೋಗ್ಯಕರವಾಗಿರಿಸಿಕೊಳ್ಳುತ್ತದೆ.

ಆ್ಯಂಟಿ ಏಜಿಂಗ್ ಹಣ್ಣು

ಸೀತಾಫಲ ಹಣ್ಣಿನಲ್ಲಿರುವ ಮುಖ್ಯ ಅಂಶವೆಂದರೆ ಆಸ್ಕೋರ್ಬಿಕ್ ಆಮ್ಲ ಅಥವಾ ವಿಟಮಿನ್ ಸಿ. ದೇಹವು ಉತ್ಪಾದಿಸಿಕೊಳ್ಳಲಾಗದ ಕೆಲವು ಪೋಷಕಾಂಶಗಳಲ್ಲಿ ಇದು ಒಂದಾಗಿದೆ. ನೀವು ಸೇವಿಸುವ ಆಹಾರ ಮೂಲಗಳಿಂದ ಇದು ಬರಬೇಕಾಗುತ್ತದೆ. ಆದರೆ ಸೀತಾಫಲ ಈ ವಿಟಮಿನ್‌ನ ಅತ್ಯಂತ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ, ಆಂಟಿ ಏಜಿಂಗ್ ಹಣ್ಣಾಗಿರುವ ಸೀತಾಫಲ ದೇಹದೊಳಗಿನಿಂದ ಸ್ವತಂತ್ರ ರಾಡಿಕಲ್ಸ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹ ಸೀತಾಫಲ ಪ್ರಮುಖ ಪಾತ್ರವಹಿಸುತ್ತದೆ.

ವಿಟಮಿನ್ ಸಿ ದೇಹದ ಪ್ರತಿರಕ್ಷೆಗೆ ಸಹ ಒಳ್ಳೆಯದು. ಆದ್ದರಿಂದ ಸೀತಾಫಲ ಸೇವಿಸುವುದರಿಂದ ನೀವು ಶೀತ, ಕೆಮ್ಮು ಮತ್ತು ಇತರ ಸಣ್ಣ ಕಾಯಿಲೆಗಳನ್ನು ಬರದಂತೆ ತಡೆಯಬಹುದು. ರುಮಟಾಯ್ಡ್ ಸಂಧಿವಾತದಂತಹ ಕಾಯಿಲೆಗಳನ್ನು ತಡೆಯಲು ಸಹ ಇದು ಸಹಾಯ ಮಾಡುತ್ತದೆ.

ಹೃದಯಾಘಾತವಾಗದಂತೆ ತಡೆಯುತ್ತದೆ

ಸೀತಾಫಲದಲ್ಲಿ ಮೆಗ್ನೀಶಿಯಂ ಅಂಶ ಹೆಚ್ಚಿರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಇದು ವಿಟಮಿನ್ ಬಿ 6 ಅನ್ನು ಒಳಗೊಂಡಿದ್ದು, ಇದು ಹೃದಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು, ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ನಿಮ್ಮ ಅಪಧಮನಿಗಳು ಆರೋಗ್ಯವಾಗಿರುವಂತೆ ಸಹ ಸೀತಾಫಲ ಸಹಾಯ ಮಾಡುತ್ತದೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement