ಜಿನೆವಾ: ಪ್ರಪಂಚದಲ್ಲೆಡೆ ಹತ್ತು ಜನರಲ್ಲಿ ಒಬ್ಬರು ಪ್ರತೀ ರಾತ್ರಿ ಹಸಿವಿನಿಂದ ಮಲಗುವ ಸ್ಥಿತಿಯಿದೆ. 700 ದಶಲಕ್ಷಕ್ಕೂ ಅಧಿಕ ಜನರು ಹಸಿವಿನ ಸಂಕಟದಲ್ಲಿದ್ದು ಮಾನವೀಯ ನೆರವಿನ ನಿಧಿಗೆ ಕೊಡುಗೆ ಕ್ಷೀಣಿಸುತ್ತಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಭಯಾನಕವಾಗಿಸಿದೆ ಎಂದು ವಿಶ್ವಸಂಸ್ಥೆ ಆಹಾರ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸಿಂಡಿ ಮೆಕೈನ್ ಆತಂಕ ವ್ಯಕ್ತಪಡಿಸಿದರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು `ಹಣಕಾಸಿನ ಕೊರತೆಯಿಂದಾಗಿ ಲಕ್ಷಾಂತರ ಮಂದಿಗೆ ಆಹಾರ ಪಡಿತರವನ್ನು ಕಡಿತಗೊಳಿಸುವ ಅನಿವಾರ್ಯತೆಗೆ ನಾವು ಸಿಲುಕಿದ್ದೇವೆ.
ಜಾಗತಿಕ ಮಾನವೀಯ ಅಗತ್ಯಗಳನ್ನು ಉತ್ತೇಜಿಸುವ ಏಕಕಾಲೀನ ಮತ್ತು ದೀರ್ಘಾವಧಿಯ ಬಿಕ್ಕಟ್ಟುಗಳ ಸರಣಿಯೊಂದಿಗೆ ನಾವು ಜೀವಿಸುತ್ತಿದ್ದೇವೆ. ಇದು ಮಾನವೀಯ ಸಮುದಾಯದ ಹೊಸ ವಾಸ್ತವಿಕತೆಯಾಗಿದೆ. ಈ ಪರಿಸ್ಥಿತಿ ಮುಂದಿನ ಹಲವು ವರ್ಷ ಮುಂದುವರಿಯುವ ನಿರೀಕ್ಷೆಯಿದೆ ‘ ಎಂದರು.
ಸಾಂಕ್ರಾಮಿಕ ರೋಗ, ಉಕ್ರೇನ್‍ನಲ್ಲಿನ ಯುದ್ಧದಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಆಹಾರದ ಬೆಲೆಯನ್ನು ಜಗತ್ತಿನಾದ್ಯಂತ ಕೋಟ್ಯಾಂತರ ಜನರ ಕೈಗೆ ನಿಲುಕದಷ್ಟು ಎತ್ತರಕ್ಕೇರಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹಸಿವು ಮತ್ತು ಬಡತನವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಮತ್ತು ದೀರ್ಘಾವಧಿಯಲ್ಲಿ ಮಾನವೀಯ ಅಗತ್ಯಗಳನ್ನು ಕಡಿಮೆ ಮಾಡಲು ಮಹಾತ್ವಾಕಾಂಕ್ಷೆಯ, ಬಹುವಲಯ ಪಾಲುದಾರಿಕೆಯನ್ನು ಹೆಚ್ಚಿಸುವ ಸವಾಲು ನಮ್ಮ ಎದುರಿಗಿದೆ ಎಂದು ಸಿಂಡಿ ಮೆಕೈನ್ ತಿಳಿಸಿದ್ದಾರೆ.