ಜುಲೈ 2023 ರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ನೌಕರರ ಡಿಎ ಹೆಚ್ಚಳವಾಗಲಿದೆ. ಇದಾದ ನಂತರ ನೌಕರರ ವೇತನದಲ್ಲಿ ಗಣನೀಯ ಏರಿಕೆ ಕಂಡು ಬರಲಿದೆ. ಈ ಮೂಲಕ ಹಬ್ಬದ ಸೀಸನ್ ನಲ್ಲಿ ಸರ್ಕಾರಿ ಉದ್ಯೋಗಿಗಳು ಭರ್ಜರಿ ಗಿಫ್ಟ್ ನಿರೀಕ್ಷಿಸಬಹುದು ಎನ್ನಲಾಗಿದೆ.
ಏತನ್ಮಧ್ಯೆ, ಎಂಟನೇ ವೇತನ ಆಯೋಗವನ್ನು ಜಾರಿಗೆ ತರುವಂತೆ ಕೇಂದ್ರ ನೌಕರರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಆದರೆ ಇದಕ್ಕೆ ಕೇಂದ್ರ ಮೋದಿ ಸರ್ಕಾರ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರ ಎಂಟನೇ ವೇತನ ಆಯೋಗದ ಸೂತ್ರವನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸೂತ್ರದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕೇಂದ್ರ ನೌಕರರ ವೇತನ ಹೆಚ್ಚಾಗಲಿದೆ. ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ಎಂಟನೇ ವೇತನ ಆಯೋಗದ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲು ಸರ್ಕಾರ ಸಜ್ಜಾಗಿದೆ. ಸರ್ಕಾರ ಶೀಘ್ರದಲ್ಲೇ ಎಂಟನೇ ವೇತನ ಆಯೋಗವನ್ನು ಜಾರಿಗೆ ತರಬಹುದು ಎಂದು ಅಂದಾಜಿಸಲಾಗಿದೆ.
ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಎಂಟನೇ ವೇತನ ಆಯೋಗವನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ ಎಂದು ಹೇಳಿದ್ದರು. ಆದರೆ, ಸದ್ಯದಲ್ಲಿಯೇ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬಹುದು ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮೊದಲು ಎಂಟನೇ ವೇತನ ಆಯೋಗದ ಬಗ್ಗೆ ಸರ್ಕಾರವು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.