ಕೋವಿಡ್ ಸಾಂಕ್ರಾಮಿಕದ ಬಳಿಕ ಉದ್ಯೋಗ ಕಡಿತದ ಭೀತಿ ಎಲ್ಲೆಡೆಯೂ ಇದೆ. ಈಗಾಗಲೇ ಸುಪ್ರಸಿದ್ದ ಕಂಪೆನಿಗಳಲ್ಲಿ ಇದ್ದ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದೀಗ ಭಾರತದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಎಡ್ಟೆಕ್ ನ ಬೈಜುಸ್ ನಲ್ಲಿ 4 ರಿಂದ 5 ಸಾವಿರ ಉದ್ಯೋಗ ಕಡಿತವಾಗಲಿದೆ ಎನ್ನಲಾಗಿದೆ.
ಬೈಜುಸ್ ನ ನ್ಯೂ ಇಂಡಿಯಾ ಸಿಇಒ ಅರ್ಜುನ್ ಮೋಹನ್ ಅವರು ಬೃಹತ್ ಪುನರ್ ರಚನೆ ಕಾರ್ಯ ಪ್ರಾರಂಭಿಸಿದ್ದು, ಥಿಂಕ್ ಆಂಡ್ ಲರ್ನ್ ಪ್ರೈವೆಟ್ ಲಿಮಿಟೆಡ್ ನ ಭಾರತದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ದೀರ್ಘ ಕಾಲದಿಂದ ಬೈಜು ನಲ್ಲಿ ಕೆಲಸ ಮಾಡುತ್ತಿದ್ದ ಅನುಭವಿಯಾಗಿರುವ ಅರ್ಜುನ್ ತಮ್ಮ ನಿರ್ಧಾರವನ್ನು ಹಿರಿಯ ನಾಯಕರಿಗೆ ತಿಳಿಸಿದ್ದಾರೆ. ಉದ್ಯೋಗ ಕಡಿತವು ಮಾರಾಟ, ಮಾರುಕಟ್ಟೆ ಮತ್ತು ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಎಡ್ಟೆಕ್ ಈಗಾಗಲೇ ಕಚೇರಿ ಸ್ಥಳವನ್ನು ಬಿಟ್ಟುಕೊಟ್ಟಿದೆ. ತನ್ನ ಅಂಗಸಂಸ್ಥೆಗಳ ಮಾರಾಟಕ್ಕೆ ಪ್ರಯತ್ನಿಸುತ್ತಿದೆ. ಹೊರಗಿನಿಂದ ಧನ ಸಹಾಯಕ್ಕೆ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಈ ಹಿಂದೆಯೂ ಒಮ್ಮೆ ಅನೇಕ ಬಾರಿ ಉದ್ಯೋಗ ಕಡಿತವನ್ನು ಮಾಡಿತ್ತು.
ಬೈಜುಸ್ 1.2 ಬಿಲಿಯನ್ ಡಾಲರ್ ಸಾಲ ಹೊಂದಿದ್ದು, ಮುಂದಿನ ಆರು ತಿಂಗಳಲ್ಲಿ ಇದನ್ನು ಮರುಪಾವತಿಸುವ ಭರವಸೆಯನ್ನು ಅದು ಸಾಲ ನೀಡಿದವರಿಗೆ ನೀಡಿದೆ. ಇದಕ್ಕಾಗಿ ಮುಂದಿನ ಮೂರು ತಿಂಗಳಲ್ಲಿ 300 ಮಿಲಿಯನ್ ಡಾಲರ್ ಮುಂಗಡವಾಗಿ ಪಾವತಿಸಬೇಕಿದೆ.
ಇದಕ್ಕಾಗಿ ಅದು ತನ್ನ ಗ್ರೇಟ್ ಲರ್ನಿಂಗ್ ಮತ್ತು ಯುಎಸ್ ಮೂಲದ ಎಪಿಕ್ ಅನ್ನು ಮಾರಾಟ ಮಾಡುವ ಚಿಂತನೆ ನಡೆಸುತ್ತಿದೆ.
ಸುಧಾರಿತ ಮತ್ತು ಸುಸ್ಥಿರ ಕಾರ್ಯಚರಣೆಗಾಗಿ ಅರ್ಜುನ್ ಮೋಹನ್ ಅವರು ಮುಂದಿನ ಕೆಲವು ವಾರಗಳಲ್ಲಿ ಉದ್ಯೋಗ ಕಡಿತದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ. ಉತ್ತಮ ನಗದು ಹರಿವಿನ ನಿರ್ವಹಣೆಗೆ ಪುನರ್ ರಚನೆಯ ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಬೈಜುಸ್ ನ ವಕ್ತಾರರು ತಿಳಿಸಿದ್ದಾರೆ.