ಸಿಂಪಲ್ಲಾಗಿ ಹೀಗ್ಮಾಡಿ ಪಾಲಕ್ ದಾಲ್ ಕಿಚಡಿ..

ನಿತ್ಯ ಬೆಳಗ್ಗೆ ಎದ್ದು ಏನಪ್ಪಾ ಅಡುಗೆ ಮಾಡೋದು ಅನ್ನೋ ಚಿಂತೆ ನಮ್ಮೆಲ್ಲರನ್ನು ಕಾಡುತ್ತೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ರೆ ಅವರಿಗೆ ಪೌಷ್ಠಿಕ ಆಹಾರದ ಅವಶ್ಯಕತೆ ಹೆಚ್ಚಾಗಿಯೇ ಇರುತ್ತೆ. ಮಕ್ಕಳಿಗಾಗಿ ಬೆಳಗಿನ ಉಪಹಾರವಾಗಿ ರುಚಿಕರ ಹಾಗೂ ಆರೋಗ್ಯಕರವಾದ ಅಡುಗೆಯನ್ನೇ ಮಾಡಿಕೊಡಬೇಕು. ಇದ್ರಿಂದ ಮಕ್ಕಳ ಆರೋಗ್ಯವು ಚೆನ್ನಾಗಿರುತ್ತೆ. ಹೀಗಾಗಿ ಮಕ್ಕಳಿಗೆ ಬೆಳೆ, ಕಾಳು, ತರಕಾರಿಯಿಂದ ಕೂಡಿರೋ ನ್ಯೂಟ್ರಿಶಿಯನ್ ಫುಡ್ ಮಾಡಿಕೊಡಿ. ಪೌಷ್ಠಿಕ ಆಹಾರವಾಗಿ ನೀವು ಪಾಲಕ್ ದಾಲ್ ಕಿಚಡಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಭಾರತದ ಪ್ರಸಿದ್ಧ ಆಹಾರಗಳಲ್ಲಿ ಕಿಚಡಿಯೂ ಒಂದಾಗಿದೆ. ಕಿಚಡಿ ಆರೊಗ್ಯಕರವಾದ ಆಹಾರವಾಗಿದ್ದು, ಇದನ್ನು ಬೆಳಗ್ಗೆ, ಸಂಜೆ ಯಾವ ಹೊತ್ತಿನಲ್ಲಿ ಬೇಕಾದರೂ ಸವಿಯಬಹುದು.

ಹಾಗಿದ್ದರೆ ಇದನ್ನು ಮಾಡೋದು ಹೇಗೆ ಅಂತೀರಾ..? ಇಲ್ಲಿದೆ ನೋಡಿ ರೆಸಿಪಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು:

ಹೆಚ್ಚಿದ ಪಾಲಕ್ – 1 ಕಪ್
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 2
ಅಕ್ಕಿ – ಒಂದೂವರೆ ಕಪ್
ಬೇಳೆ – 1 ಕಪ್
ಜೀರಿಗೆ – 1 ಚಮಚ
ಸಾಸಿವೆ – 1 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಅರಶಿಣ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅಚ್ಚ ಖಾರದ ಪುಡಿ – ಸ್ವಲ್ಪ
ಕರಿ ಬೇವು – 5ರಿಂದ 6 ಎಲೆ
ತುಪ್ಪ – 1 ಚಮಚ
ಹಸಿರು ಮೆಣಸು – ಅಗತ್ಯಕ್ಕೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ನೀರು – 1 ಗ್ಲಾಸ್

Advertisement

ಮಾಡುವ ವಿಧಾನ:

  • ಮೊದಲಿಗೆ ಅಕ್ಕಿ ಮತ್ತು ಬೇಳೆಯನ್ನು 2ರಿಂದ 3 ಬಾರಿ ಚೆನ್ನಾಗಿ ತೊಳೆದು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
  • ಬಳಿಕ ಒಂದು ಕುಕ್ಕರಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಗಿಡಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
  • ನಂತರ ಇದಕ್ಕೆ ಹೆಚ್ಚಿದ ಟೊಮೆಟೋ, ಈರುಳ್ಳಿ ಮತ್ತು ಹಸಿರು ಮೆಣಸು ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ.
  • ಈಗ ಇದಕ್ಕೆ ಅರಶಿಣ ಪುಡಿ, ಕೊತ್ತಂಬರಿ ಪುಡಿ ಮತ್ತು ಅಚ್ಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
  • ಬಳಿಕ ನೆನೆಸಿಟ್ಟಿದ್ದ ಬೇಳೆ ಮತ್ತು ಅಕ್ಕಿಯನ್ನು ಹಾಕಿಕೊಂಡು ಒಂದು ಗ್ಲಾಸ್ ನೀರನ್ನು ಸೇರಿಸಿಕೊಂಡು 2 ನಿಮಿಷಗಳ ಕಾಲ ಬೇಯಲು ಬಿಡಿ. ಈಗ ಇದಕ್ಕೆ ಹೆಚ್ಚಿದ ಪಾಲಕ್ ಸೊಪ್ಪನ್ನು ಹಾಕಿಕೊಂಡು ಕುಕ್ಕರ್ ಮುಚ್ಚಳವನ್ನು ಮುಚ್ಚಿ 10ರಿಂದ 12 ನಿಮಿಷಗಳವರೆಗೆ ಬೇಯಿಸಿಕೊಳ್ಳಿ.
  • ಕುಕ್ಕರ್ 2 ವಿಶಲ್ ಆದ ಬಳಿಕ ಕಿಚಡಿಯನ್ನು ಕುಕ್ಕರ್‌ನಿಂದ ತೆಗೆದು ಒಂದು ಪಾತ್ರೆಗೆ ಹಾಕಿಕೊಂಡು ಅದರ ಮೇಲೆ ಒಂದು ಚಮಚ ತುಪ್ಪವನ್ನು ಹಾಕಿಕೊಳ್ಳಿ.
  • ಈಗ ಬಿಸಿ ಬಿಸಿ ಪಾಲಕ್ ದಾಲ್ ಕಿಚಡಿ ಸವಿಯಲು ಸಿದ್ಧ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement