ಹಾಸನ : ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಹೊರ ವಲಯದ ಹುತ್ತದ ಮುಂದೆ ಗುರುವಾರ ಸ್ವಾಮೀಜಿ, ಸನ್ಯಾಸಿಗಳು ಬಳಸುವ ಪಾದುಕೆ ಹಾಗು ದಂಡಗಳು ಪತ್ತೆಯಾಗಿವೆ. ಇಷ್ಟೊಂದು ಸಂಖ್ಯೆಯಲ್ಲಿ ಪಾದುಕೆಗಳು ಒಂದೆಡೆ ಸಿಕ್ಕಿರುವುದು ಪೊಲೀಸರಿಗೂ ದೊಡ್ಡ ತಲೆ ನೋವಾಗಿದೆ. ದೋಷ ಪರಿಹಾರ, ಮಾಟ-ಮಂತ್ರ, ಸಿನಿಮಾ ಅಥವಾ ಧಾರಾವಾಹಿ ಚಿತ್ರೀಕರಣಕ್ಕಾಗಿ ಹೀಗೆ ಮಾಡಿರಬಹುದೇನೋ ಎನ್ನುವ ಶಂಕೆ ಕೂಡಾ ಒಂದೆಡೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನು 12 ಜತೆ ಪಾದುಕೆ ಹಾಗೂ 28 ದಂಡಗಳ ದಿಢೀರ್ ಪ್ರತ್ಯಕ್ಷದಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಒಂದು ವೇಳೆ ಯಾವುದಾದರೂ ಮಠದ ಸ್ವಾಮೀಜಿಗಳೇ ಬೇಡವೆಂದು ಬಿಟ್ಟು ಹೋಗಿದ್ದರೆ ಒಟ್ಟಾಗಿ ಬೀಸಾಕಿ ಹೋಗಬಹುದಿತ್ತು ಅಥವಾ ಚೆಲ್ಲಾಪಿಲ್ಲಿಯಾಗಿ ಮೂಲೆಯಲ್ಲಿ ಬಿಸಾಕಬೇಕಿತ್ತು. ಆದರೆ ವಿಶಾಲ ಪ್ರದೇಶದಲ್ಲಿ ಸರತಿ ಸಾಲಿನಲ್ಲಿ ಜೋಡಿಸಿ ಪಾದುಕೆ ಹಾಗೂ ದಂಡವನ್ನು ಇಡಲಾಗಿದೆ. ಹೀಗಾಗಿ ಇದು ಕುತೂಹಲದೊಂದಿಗೆ ಭಯವನ್ನುಂಟು ಮಾಡಿದೆ.