ತುಮಕೂರು: ಆಸ್ತಿ ವಿಚಾರಕ್ಕೆ ಮಹಿಳೆಯೊಬ್ಬರ ಪ್ರಾಣಪಕ್ಷಿಯೇ ಹಾರಿಹೋಗಿದೆ. ಶಿವಮ್ಮ (65) ಹತ್ಯೆಯಾದವರು. ನಂದೀಶ್ ಎಂಬಾತನೊಂದಿಗೆ ಆಸ್ತಿ ವಿಚಾರಕ್ಕೆ ಶಿವಮ್ಮ ಕಿತ್ತಾಡಿಕೊಂಡಿದ್ದು, ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕಿನ ದಂಡಿನಶಿವರ ಬಳಿಯಿರುವ ಡಿ.ಪಾಳ್ಯದಲ್ಲಿ ಘಟನೆ ನಡೆದಿದೆ.
ಆರೋಪಿ ನಂದೀಶ್ ಹಾಗೂ ಶಿವಮ್ಮ ನಡುವೆ ಹಲವು ವರ್ಷಗಳಿಂದ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಶನಿವಾರ (ಅ.7) ಇದೇ ವಿಚಾರ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದಿದ್ದು, ಕೋಪದ ಕೈಗೆ ಬುದ್ದಿ ಕೊಟ್ಟ ನಂದೀಶ್ ಶಿವಮ್ಮನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ರಕ್ತದ ಮಡುವಿನಲ್ಲೇ ಬಿದ್ದು ಒದ್ದಾಡಿದ ಶಿವಮ್ಮ ಸ್ಥಳದಲ್ಲೇ ಅಸುನೀಗಿದ್ದಾಳೆ. ಹತ್ಯೆ ಬಳಿಕ ಆರೋಪಿ ನಂದೀಶ್ ತಾನೇ ದಂಡಿನಶಿವರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಹತ್ಯೆ ನಡೆದ ಸ್ಥಳಕ್ಕೆ ದಂಡಿನ ಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.