ಬೆಂಗಳೂರು : ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದ ಬೆನ್ನಲ್ಲೇ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂಬ ಕೂಗು ಕೇಳಿ ಬಂದಿದೆ! ಖಾಸಗಿ ಚಾನೆಲ್ ವೊಂದರ ರಿಯಾಲಿಟಿ ಶೋ “ಬಿಗ್ ಬಾಸ್” ಮನೆಗೆ ಹೋಗಿ ಬಂದ ಶಾಸಕರ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ವಂದೇ ಮಾತರಂ ಸೇವಾ ಸಂಸ್ಥೆಯೊಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನರಿಂದ ಆಯ್ಕೆಯಾಗಿರುವ ಮತ್ತು ಸರ್ಕಾರದಿಂದ ಶಾಸಕನಾಗಿ ಸಂಬಳ ತೆಗೆದಯಕೊಳ್ಳುವ ಪ್ರದೀಪ್ ಈಶ್ವರ್ ದ್ರೋಹವೆಸಗಿದ್ದಾರೆ. ತಾನೊಬ್ಬ ಶಾಸಕನೆಂಬುದನ್ನು ಮರೆತು ಬಿಗ್ ಬಾಸ್ ಮನೆಯಲ್ಲಿ ಕುಣಿದಾಡಿದ್ದಾರೆ. ಜನರ ಸಂಕಷ್ಟಕ್ಕೆ ಧ್ವನಿಯಾಗಬೇಕಾದ ಒಬ್ಬ ಜನಪ್ರತಿನಿಧಿ ಈ ರೀತಿಯಾಗಿ ವರ್ತಿಸೋದು ಸರಿಯಲ್ಲವೆಂದು ಆಕ್ಷೇಪಿಸಿ, ಅವರ ಮೇಲೆ ಕ್ತಮ ಜರುಗಿಸಬೇಕೆಂದು ಒತ್ತಾಯಿಸಿದೆ. ಕರ್ತವ್ಯ ಮರೆತ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ವಂದೇ ಮಾತರಂ ಸೇವಾ ಸಂಸ್ಥೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ನೀಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಅತ್ತ ಮಾಜಿ ಸಚಿವ ಕೆ.ಸುಧಾಕರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎಂಥವರನ್ನ ನಾವು ಶಾಸಕರನ್ನಾಗಿ ಆಯ್ಕೆ ಮಾಡಿದೆವಲ್ಲ ಅಂತಾ ಚಿಕ್ಕಬಳ್ಳಾಪುರದ ಜನರಿಗೀಗ ಮನವರಿಕೆಯಾಗಿದ್ದು, ಪಶ್ಚಾತ್ತಾಪ ಪಡುವಂತಾಗಿದೆ ಎಂದಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಕೆಲ ಹೊತ್ತು ಕಾಣಿಸಿಕೊಂಡಿದ್ದರು. ಬಳಿಕ ಅಲ್ಲಿಂದ ಹೊರ ಬಂದಿದ್ದರು.