Alert : ಕಂಪಿಸಿದ ಮೊಬೈಲ್

ಬೆಂಗಳೂರು: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಲಾ ಮೊಬೈಲ್ ಬಳಕೆದಾರರಿಗೆ ಪ್ರಾಯೋಜಿಕ ಸಂದೇಶವೊಂದನ್ನು ರವಾನಿಸಿದೆ. ಇಂದು ಬೆಳಿಗ್ಗೆ ದೇಶಾದ್ಯಂತ ಬಹುತೇಕರ ಮೊಬೈಲ್‍ಗಳಿಗೆ ಈ ರೀತಿಯ ಸಂದೇಶಗಳು ಬಂದಿವೆ. ಅದರಲ್ಲಿ ಇದು ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆಯಿಂದ ಸೇಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್ ಇಂಡಿಯಾ ತುರ್ತು ಎಚ್ಚರಿಕೆಯ ಸಂದೇಶವನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭದಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ನಮೂದಿಸಲಾಗಿದೆ.  ಈ ಸಂದೇಶ ರವಾನೆಯಾದ ಸಂದರ್ಭದಲ್ಲಿ ಸಹಜವಾಗಿಯೇ ಮೊಬೈಲ್‍ನಲ್ಲಿ ಯಾಂತ್ರೀಕೃತವಾಗಿ ವೈಬರೇಟ್ ಮೋಡ್ ಸಕ್ರಿಯವಾಗಿದೆ. ಜೊತೆಗೆ ಸಂದೇಶವನ್ನು ಇಂಗ್ಲಿಷ್‍ನಲ್ಲಿ ವಾಯ್ಸ್ ಮೂಲಕ ತಿಳಿಸಲಾಗಿದೆ. ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲೂ ಲಿಖಿತ ಸಂದೇಶ ರವಾನೆಯಾಗಿದೆ. ಇದು ನೆರೆ, ಭೂಕಂಪದಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಸಲುವಾಗಿ ಪರೀಕ್ಷಿಸಲಾಗಿದೆ. ಇತ್ತೀಚೆಗೆ ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ನಡೆದಿದೆ. ಅಂತಹ ಯಾವುದೇ ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರನ್ನು ಸುರಕ್ಷಿತೆಯಿಂದಿಡಲು ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಈ ಸಂದೇಶ ವೈರ್‍ಲೆಸ್ ತಂತ್ರಜ್ಞಾನವನ್ನು ಹೊಂದಿದೆ. ಸಾರ್ವಜನಿಕರಿಗೆ ಸಕಾಲಿಕ ಹಾಗೂ ತ್ವರಿತ ಮಾಹಿತಿ ರವಾನೆ ಮಾಡಲಿದೆ. ಕಳೆದ ಎರಡು ತಿಂಗಳಿನಿಂದಲೂ ದೇಶದ ವಿವಿಧ ಭಾಗಗಳಿಂದ ಈ ರೀತಿಯ ಸಂದೇಶಗಳನ್ನು ನಿಯತಕಾಲಿಕವಾಗಿ ರವಾನಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 10 ರಿಂದ ಸಾರ್ವತ್ರಿಕವಾಗಿ ಸಂದೇಶಗಳು ರವಾನೆಯಾಗಿವೆ. ಎಲ್ಲೆಲ್ಲಿ ಸಂದೇಶಗಳು ತಲುಪಿಲ್ಲ ಎಂಬುದರ ಮಾಹಿತಿಯನ್ನು ಸರ್ಕಾರ ಗುರುತಿಸುತಿಸುವ ಪ್ರಯತ್ನ ನಡೆಸಿದೆ. ಒಂದು ವೇಳೆ ಸಂದೇಶ ತಲುಪದೇ ಇದ್ದವರು ಸ್ಮಾರ್ಟ್ ಫೋನಿನ ಸೆಟ್ಟಿಂಗ್ ತೆರೆದು ನೋಟಿಫಿಕೇಶನ್ ಎಂದು ಟೈಪ್ ಮಾಡಿ ಅಡ್ವಾನ್ಸ್ ಸೆಟ್ಟಿಂಗ್‍ನಲ್ಲಿ ವೈರ್‍ಲೆಸ್ ಎಮರ್ಜೆನ್ಸಿ ಅಲರ್ಟ್ ಅನ್ನು ಎನ್‍ಏಬೆಲ್ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.  ಇದು ಮುಂದಿನ ದಿನಗಳಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಸರ್ಕಾರ ಅಥವಾ ಸುರಕ್ಷತಾ ಸಂಸ್ಥೆಗಳು ಒದಗಿಸುವ ಸಂದೇಶವನ್ನು ಸ್ವೀಕರಿಸಿ ಮುನ್ನೆಚ್ಚರಿಕೆ ವಹಿಸಲು ನೆರವಾಗಲಿದೆ. ಪುನರಾವರ್ತಿತ ಸಂದೇಶಗಳಿಂದಾಗಿ ಕಿರಿಕಿರಿ ಎನಿಸಿದರೂ ಇದನ್ನು ಜಾಗೃತವಾಗಿಟ್ಟುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement