ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಭಟ್ ನಿವೃತ್ತಿ – ಸಿಗಲಿಲ್ಲ ಸಾಂಪ್ರದಾಯಿಕ ಬೀಳ್ಕೊಡುಗೆ

ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಶ್ರೀಪತಿ ರವೀಂದ್ರ ಭಟ್ ಅವರು ಇಂದು ನಿವೃತ್ತಿ ಹೊಂದಲಿದ್ದಾರೆ. ಆದರೆ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ವಿದೇಶದಲ್ಲಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಕಳುಹಿಸಿಕೊಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಮುಖ್ಯ ನ್ಯಾಯಾಧೀಶರ ಅನುಪಸ್ಥಿತಿಯಲ್ಲಿ, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಲ್ಲಿ ಅತ್ಯಂತ ಹಿರಿಯ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ನ್ಯಾಯಮೂರ್ತಿ ಶ್ರೀಪತಿ ರವೀಂದ್ರ ಭಟ್ ಅವರಿಗೆ ಗೌರವ ಸಲ್ಲಿಸುತ್ತಾರೆ. ಈ ಇಬ್ಬರೂ ದೆಹಲಿ ಹೈಕೋರ್ಟ್‌ನಿಂದ ಬಂದವರಾಗಿದ್ದಾರೆ. ಮೊನ್ನೆಯಷ್ಟೇ ನ್ಯಾಯಮೂರ್ತಿ ಶ್ರೀಪತಿ ರವೀಂದ್ರ ಭಟ್ ಅವರು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಪಿ.ಎಸ್ ನರಸಿಂಹ ಅವರೊಂದಿಗೆ ಬಹುಮತದೊಂದಿದೆ ಸಲಿಂಗ ದಂಪತಿಗಳಿಗೆ ನಾಗರಿಕ ಒಕ್ಕೂಟ ಮತ್ತು ದತ್ತು ಹಕ್ಕುಗಳನ್ನು ನಿರಾಕರಿಸಿದ್ದರು. ಸಿಜೆಐ ಚಂದ್ರಚೂಡ್ ಸೇರಿದಂತೆ ಇಬ್ಬರು ನ್ಯಾಯಮೂರ್ತಿಗಳು ಬರೆದ ಎರಡು ಮುಖ್ಯ ತೀರ್ಪುಗಳಲ್ಲಿ ಸಲಿಂಗ ಕಾಮಕ್ಕೆ ಅವಕಾಶ ನೀಡಿದ್ದರೆ, ಭಟ್ ತಮ್ಮ ತೀರ್ಪಿನಲ್ಲಿ ಇದನ್ನು ನಿರಾಕರಿಸಿದ್ದರು ಹಾಗೂ ಇತರ ನ್ಯಾಯಮೂರ್ತಿಗಳ ತಾರ್ಕಿಕತೆಯನ್ನು ಟೀಕಿಸಿದ್ದರು. 1950ರಿಂದ ಸುಪ್ರೀಂ ಕೋರ್ಟ್ ರಚನೆಯಾದಾಗಿನಿಂದ, ನಿವೃತ್ತಿಯಾಗುವ ನ್ಯಾಯಾಧೀಶರು ತಮ್ಮ ಕಚೇರಿಯ ಕೊನೆಯ ದಿನದಂದು ಸುಪ್ರೀಂ ಕೋರ್ಟ್‌ನ ಅತಿದೊಡ್ಡ ನ್ಯಾಯಾಲಯದ ಕೊಠಡಿಯಲ್ಲಿ ಮುಖ್ಯ ನ್ಯಾಯಾಧೀಶರೊಂದಿಗೆ ಔಪಚಾರಿಕ ಪೀಠ ಹಂಚಿಕೊಳ್ಳುವುದು ಸಂಪ್ರದಾಯವಾಗಿದೆ. ವಕೀಲರ ಸಮ್ಮುಖದಲ್ಲಿ, ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಮತ್ತು ಬಾರ್ ನಾಯಕರು ಸಂಕ್ಷಿಪ್ತ ಭಾಷಣಗಳ ಮೂಲಕ ನಿವೃತ್ತ ನ್ಯಾಯಾಧೀಶರಿಗೆ ಬೀಳ್ಕೊಡುಗೆ ನೀಡಲಾಗುತ್ತಿದೆ. ಆದರೆ ಈ ಬಾರಿ ನ್ಯಾಯಮೂರ್ತಿ ಶ್ರೀಪತಿ ರವೀಂದ್ರ ಭಟ್ ಅವರಿಗೆ ಆ ರೀತಿ ಗೌರವ ಕೊಡಲು ಸಾಧ್ಯವಾಗುತ್ತಿಲ್ಲ. ನ್ಯಾಯಮೂರ್ತಿ ಶ್ರೀಪತಿ ರವೀಂದ್ರ ಭಟ್ ಅವರು 2004ರ ಜುಲೈ 16ರಂದು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು, 2019ರ ಮೇ 5 ರಂದು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು ಮತ್ತು ಸೆಪ್ಟೆಂಬರ್, 2019ರ 23 ರಂದು ಎಸ್‌ಸಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸುಪ್ರಿಂಕೋರ್ಟ್ ನ್ಯಾಯಮೂರ್ತಿಯಾಗಿ ಶ್ರೀಪತಿ ರವೀಂದ್ರ ಭಟ್ ಅವರು 122 ತೀರ್ಪುಗಳನ್ನು ಬರೆದಿದ್ದಾರೆ ಮತ್ತು ಇತರರು ನೀಡಿದ 433 ತೀರ್ಪುಗಳ ಭಾಗವಾಗಿದ್ದರು ಎಂದು ತಿಳಿಸಲಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement