ಏತ ನೀರಾವರಿ ರಾಜಕೀಯಕ್ಕೆ ಬಳಕೆ ಮಾಡೋದು ಬೇಡ: ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.!

ಚಿತ್ರದುರ್ಗ:  ಭರಮಸಾಗರ ಏತ ನೀರಾವರಿ ಯೋಜನೆ ಅನುಷ್ಠಾನದ ಸಂಗತಿಯ ಯಾರೂ ರಾಜಕೀಯಗೊಳಿಸಬಾರದು.  ಎಲ್ಲ ಪಕ್ಷಗಳು, ಎಲ್ಲರ ಶ್ರಮ ಇದರ ಹಿಂದೆ ಇದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಏತನೀರಾವರಿ ಯೋಜನೆ ಕೆರೆಗಳ ವೀಕ್ಷಣೆ ಅಂಗವಾಗಿ ಭಾನುವಾರ ಮುದ್ದಾಪುರ, ಯಳಗೋಡು ಕೆರೆಗಳಿಗೆ ಭೇಟಿ ನೀಡಿದ್ದಶ್ರೀಗಳು ಮುದ್ದಾಪುರದಲ್ಲಿ ನಡೆದ ಅಚ್ಚುಕಟ್ಟುದಾರರ ಸಭೆಯಲ್ಲಿ ಮಾತನಾಡಿದರು. ಭರಮಣ್ಣನಾಯಕ ಕೆರೆ ಕಟ್ಟಿಸದಿದ್ದರೆ ನಾವು ನೀರು ತರಲು ಸಾಧ್ಯವಾಗುತ್ತಿರಲಿಲ್ಲ. ಪುಣ್ಯಾತ್ಮ ಸಾವಿರ ಎಕರೆಯಲ್ಲಿ ಕೆರೆ ಕಟ್ಟಿಸಿದ. ಕೆರೆ ಕಟ್ಟಿ 300 ವರ್ಷಗಳ ನಂತರ  2021 ಸೆಪ್ಪಂಬರ್ ನಲ್ಲಿ ಏತ ನೀರಾವರಿ ಯೋಜನೆ ನೀರು ಬಂತು ಎಂದರು.

     ಭರಮಸಾಗರ ಯೋಜನೆ ಹೆಸರು ಬದಲಾವಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶ್ರೀಗಳು ಭರಮಣ್ಣನಾಯಕ ಹೆಸರಲ್ಲಿ ಯೋಜನೆ ಮುಂದುವರಿಯಲಿ. ಹೆಸರಿಗಿಂತ ಅದರ ಹಿಂದಿನ ಆಶಯ ಮುಖ್ಯ. ಅಕ್ಕಿ, ಅಕ್ಷರ ಯಾರು ಕಂಡು ಹಿಡಿದರು. ದಿನ ಅನ್ನ ತಿಂತೀರಾ. ಭತ್ತದಲ್ಲಿ ಅಕ್ಕಿ ಇದೆ ಎಂದು ಯಾರಿಗೆ ತಾನೇ ಗೊತ್ತಿತ್ತು. ಇದನ್ನು ತಿಳಿಸಿದವರು ಯಾರು ಎಂದು ಶ್ರೀಗಳು ಪ್ರಶ್ನಿಸಿದರು.

Advertisement

     2008 ರಲ್ಲಿ ಜಗಳೂರಿನಲ್ಲಿ ತರಳುಬಾಳು ಹುಣ್ಣಿಮೆ ಆದಾಗ  ಏತ ನೀರಾವರಿ ಯೋಜನೆ ಪ್ರಸ್ತಾಪ ಮಾಡಿದೆವು. 1200 ಕೋಟಿ ರುಪಾಯಿ ಮೊತ್ತದ ಕರಡು ಯೋಜನೆ ರೂಪಿಸಿದ್ದೆವು.  ಯೋಜನೆ ಮಂಜೂರು ಆಗಿದೆ ಎಂದು ಸಚಿವರು, ಶಾಸಕರು ಹೇಳುತ್ತಲೇ ಬಂದರು. ನಾವು  ಅಂದಿನ ಸಚಿವ  ಶಾಮನೂರು ಮಲ್ಲಿಕಾರ್ಜುನ ಗೆ ಬೆನ್ನು ಹತ್ತಿ ಬಜೆಟ್ ನಲ್ಲಿ ಸೇರಿಸಿದೆವು. ದಾಖಲೆ ತರಿಸಿಕೊಂಡು  ಖಾತರಿ ಮಾಡಿಕೊಂಡೆವು.

        ಯೋಜನೆ ಅನುಷ್ಠಾನದ ವಿಚಾರದಲ್ಲಿ  ಸರ್ಕಾರದ ನಿಬಂಧನೆ ಜಾಸ್ತಿ. ಅದರದ್ದೇ ಆದ ವ್ಯವಸ್ಥೆ ಇದೆ. ಯೋಜನೆ ಒಪ್ಪಿಗೆಗೆ ಸಮಿತಿ ಮುಂದೆ ಹೋಯ್ತು. ಅಲ್ಲಿ ಡಿ.ಕೆ.ಶಿವಕುಮಾರ್, ವೀರಪ್ಪ ಮೊಯ್ಲಿ ಇದ್ದರು. ಸಿರಿಗೆರೆ ಶ್ರೀಗಳ ಕೆಲಸ ಮೊದಲು ಮಾಡಿ ಎಂದು ವೀರಪ್ಪ ಮೊಯ್ಲಿ ಡಿ.ಕೆ.ಶಿವಕುಮಾರ್ ಗೆ ಸಲಹೆ ಮಾಡಿದರು. ಪರಿಣಾಮ 1200 ಕೋಟಿ ರುಪಾಯಿ ವೆಚ್ಚದ ಯೋಜನೆ ಮುಂಜೂರಾಯಿತು .

    ಇದೇ ವೇಳೆಗೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಬಂದಿದ್ದರಿಂದ ನಾವು ಗೋಕಾಕ್ ಪ್ರವಾಸದಲ್ಲಿದ್ದೆವು. ಯಡಿಯೂರಪ್ಪ ಅವರು 1200 ಕೋಟಿ ರುಪಾಯಿ ವೆಚ್ಚದ ಯೋಜನೆಯ 250 ಕೋಟಿ ರುಪಾಯಿಗೆ ಸೀಮಿತಗೊಳಿಸಿ ಮಂಜೂರಾತಿ ನೀಡಿದ್ದರು. ವಿಷಯ ತಿಳಿದ ತಕ್ಷಣ ಅಲ್ಲಿಂದಲೇ  ದೂರವಾಣಿಯಲ್ಲಿ ಸಚಿವರುಗಳಾದ  ಮಾ್ಧುಸ್ವಾಮಿ,  ಗೋವಿಂದ ಕಾರಜೋಳ,  ಬಸವರಾಜ ಬೊಮ್ಮಾಯಿ,ಸಿ.ಟಿ.ರವಿ, ಸಿ.ಸಿ ಪಾಟೀಲ್ ಅವರುಗಳ  ಸಂಪರ್ಕಿಸಿ  250 ಕೋಟಿ ರಪಾಯಿ ಯೋಜನೆಗೆ ನಾವು ಒಪ್ಪಲ್ಲ, 1250 ಕೋಟಿ ಮೊತ್ತದ ಯೋಜನೆಗೆ  ಒಂದೇ ಕಂತಲ್ಲಿ ಮಂಜೂರಾತಿ ಬೇಕು ಅಂದೆ.  ಒಂದೇ ವಾರದಲ್ಲಿ ಯಡಿಯೂರಪ್ಪ ಅವರು 250 ಕೋಟಿ  ರು ಆದೇಶ ಹಿಂಪಡೆದು, 1250 ಕೋಟಿ ಆದೇಶ ಹೊರಡಿಸಿದರು ಎಂದು ಶ್ರೀಗಳು ಹಳೆಯದ ನೆನಪು ಮಾಡಿಕೊಂಡರು.

    ಭರಮಸಾಗರ ಏತ ನೀರಾವರಿ ಅನುಷ್ಠಾನದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ,ಯಡಿಯೂರಪ್ಪ ಮೂವರ ಪಾತ್ರ ಇದೆ.

 ಎಲ್ಲ ಪಕ್ಷದವರು ನೀರು ಕೊಟ್ಟಿದ್ದಾರೆ. ಮುದ್ದಾಪುರ ಕೆರೆಯಲ್ಲಿ ಧುಮುಕು ನೀರು ನೋಡಿ ತಮಗೆ ಸ್ನಾನ ಮಾಡಬೇಕು ಅನ್ನಿಸಿತು. ಅದೊಂತರಾ ಶವರ್ ಬಾತ್  ನೋಡಿದಂಗೆ ಆಯ್ತು. ನೀರಿನ ವಿಚಾರವ ರಾಜಕೀಯಕ್ಕೆ ಯಾರೂ ಬಳಕೆ ಮಾಡಿಕೊಳ್ಳಬಾರದು. ನಿಮಗೆ ಕಾಂಗ್ರೆಸ್,  ಬಿಜೆಪಿ, ಜೆಡಿಎಸ್ ಪಕ್ಷದವರು ಕಾಣಿಸಬಹುದು. ಆದರೆ ನಮಗೆ ಎಲ್ಲರೂ ಒಂದೇ ಎಂದು ತರಳಬಾಳು ಶ್ರೀ ಹೇಳಿದರು.

 ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಇಚ್ಚಾಶಕ್ತಿಯ ಫಲವಾಗಿ 42 ಕೆರೆಗಳಿಗೆ ನೀರು ಹರಿದು ಬಂದಿದೆ. ಮುದ್ದಾಪುರ ಕೆರೆಯಲ್ಲಿ ನೀರು ನೋಡಿದಾಗ ಬಾಲ್ಯ ನೆನಪಾಯಿತು.  ಸ್ನಾನ ಮಾಡೋಣ ಎಂದೆನಿಸಿತೆಂದರು.

 ಮಾಜಿ ಸಂಸದ ಬಿ.ಎನ್.ಚಂದ್ರಪ್ಪ,  ಚೌಲಿಹಳ್ಳಿ ಶಶಿಪಾಟೀಲ್, ಕೆರೆ ಪ್ರವಾಸ ಉಸ್ತುವಾರಿ ಜಿ.ಬಿ.ತೀರ್ಥಪ್ಪ, ರೈತ ಸಂಘದ ಮುದ್ದಾಪುರ ನಾಗರಾಜ್,ಹಿರೇ ಕಬ್ಬಿಗೆರೆ ನಾಗರಾಜ್, ಬಿ..ಮಂಜುನಾಥ್, ಬೇಡರಶಿವನಕೆರೆ ಶಿವಮೂರ್ತಿ ಇದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement