ತುಮಕೂರು: ಅಕ್ಕಪಕ್ಕದ ಮನೆಯವರ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಐವರು ಆತ್ಮಹತ್ಯೆ..!

ತುಮಕೂರು: ಅಕ್ಕಪಕ್ಕದ ಮನೆಯವರ ಕಿರುಕುಳ, ವ್ಯಾಪಾರ ನಷ್ಟದಿಂದ ಬೇಸತ್ತು ಮೂರು ಮಕ್ಕಳನ್ನು ಸಾಯಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.

ನಗರದ ಸದಾಶಿವನಗರದ ಗರೀಬ್‌ಸಾಬ್‌ (36), ಸುಮಯಾ (32), ಹಾಜೀರಾ (14), ಮಹ್ಮದ್ ಶುಭಾನ್ (10) ಮಹ್ಮದ್ ಮುನೀರ್ (8) ಮೃತ ದುರ್ದೈವಿಗಳು.
ಮಕ್ಕಳಿಗೆ ಶಿಕ್ಷಣ ಕೊಡಿಸಲು ಶಿರಾ ತಾಲ್ಲೂಕಿನ ಲಕ್ಕನಹಳ್ಳಿಯಿಂದ ಗರೀಬ್ ಸಾಬ್ ನಗರಕ್ಕೆ ಬಂದಿದ್ದರು. ದುಬಾರಿ ಶಿಕ್ಷಣವೇ ಇಡೀ ಕುಟುಂಬಕ್ಕೆ ಉರುಳಾಗಿದೆ. ಗರೀಬ್ ಸಾಬ್ ಅತ್ಯಂತ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ದುಡಿದಿದ್ದು ಸಾಲುತ್ತಿರಲಿಲ್ಲ. ಮಕ್ಕಳನ್ನು ಓದಿಸಲು ಸಾಲ ಮಾಡಿದ್ದರು. ಸಾಲ ತೀರಿಸಲು ಪರದಾಡುತ್ತಿದ್ದರು. ಇದರ ಮಧ್ಯೆ ಅಕ್ಕಪಕ್ಕದ ಮನೆಯವರ ಕಿರುಕುಳ ಜಾಸ್ತಿಯಾಗಿತ್ತು ಎಂದು ಗರೀಬ್ ಸಾಬ್ ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.ಕಳೆದ ಒಂದು ವರ್ಷದ ಹಿಂದೆ ಶಿರಾ ತಾಲ್ಲೂಕಿನ ಲಕ್ಕನಹಳ್ಳಿಯಿಂದ ಬಂದು ನಗರದಲ್ಲಿ ನೆಲೆಸಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ನನಸಾಗಲೇ ಇಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆಗೆ ಐವರ ಸಂಸಾರ ಮುನ್ನಡೆಸಲು ನಡೆಸುತ್ತಿದ್ದ ವ್ಯಾಪಾರದಿಂದ ಬರುವ ಹಣ ಸಾಲುತ್ತಿರಲಿಲ್ಲ. ಕಬಾಬ್ ಮಾರಾಟ ಮಾಡಿ, ಅದರಲ್ಲಿ ಬಂದ ಹಣದಲ್ಲಿ ಮನೆ ಬಾಡಿಗೆ ಕಟ್ಟಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಬರುವ ಆದಾಯ ಸಾಲುತ್ತಿರಲಿಲ್ಲ. ಅದಕ್ಕಾಗಿ ಸಾಲವನ್ನೂ ಮಾಡಿಕೊಂಡಿದ್ದರು. ಅದರ ಜತೆಗೆ ಅಕ್ಕಪಕ್ಕದವರ ಕಿರುಕುಳ ಐವರ ಜೀವ ಬಲಿ ಪಡೆದಿದೆ.
ಡೆತ್‌ ನೋಟ್‌ನಲ್ಲಿ ಏನಿದೆ?
‘ನಮಗೆ ಸಾಲ ಹೆಚ್ಚಾಗಿದೆ, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರುತ್ತಿಲ್ಲ’ ಎಂದು ಸಾವಿಗೂ ಮುನ್ನ ಗರೀಬ್ ಸಾಬ್ ತಮ್ಮ ದೊಡ್ಡಮ್ಮನಿಗೆ ಡೆತ್ ನೋಟ್ ಬರೆದಿದ್ದಾರೆ.
ಸಂಸಾರ ಮಾಡುವುದು ಕಷ್ಟವಾಗಿದೆ. ಊಟಕ್ಕೂ ತೊಂದರೆಯಾಗುತ್ತಿದೆ. ಊರಲ್ಲಿದ್ದಾಗ ಸಂಬಂಧಿಕರು ವಿಷ ಕಾರಿದರು. ಅದಕ್ಕಾಗಿ ನಗರಕ್ಕೆ ಬಂದಿದ್ದೇವೆ ಎಂದು ಡೆತ್‌ ನೋಟ್‌ನಲ್ಲಿ ದಾಖಲಿಸಿದ್ದಾರೆ.
ಬಾಡಿಗೆ ಮನೆಗೆ 45 ಸಾವಿರ ಅಡ್ವಾನ್ಸ್ ನೀಡಲಾಗಿದೆ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನ ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ ಎಂದು ಕೋರಿದ್ದಾರೆ.

ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದಾರೆ. ನಮ್ಮ ಮನೆಯ ಕೆಳಗಿನ ಖಲಂದರ್, ಅವರ ಮಗಳು ಸಾನಿಯಾ, ಹಿರಿಯ ಮಗ, ಮಹಡಿ ಮನೆಯ ಶಬಾನಾ ಮತ್ತು ಅವಳ ಮಗಳು ಸಾನಿಯಾ ಈ ಎಲ್ಲರೂ ನಮ್ಮ ಸಾವಿಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ.

Advertisement

ಇವರ ಕಾಟಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.‌ ಇವರಿಗೆ ಗೃಹ ಮಂತ್ರಿ ಕಾನೂನು ರೀತಿ ಶಿಕ್ಷೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement