ಹಾಸನ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಭಾಗವಾಗಿ ಹಾಕಿರುವ ಪೈಪ್‌ಲೈನ್‌ಗಳಲ್ಲಿ ನೀರು ಬಿಡುವ ಎರಡನೇ ಪರೀಕ್ಷಾರ್ಥ ಪ್ರಯೋಗದ ವೇಳೆ ಎತ್ತಿನಹೊಳೆ ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡುಬಂದಿದೆ. ಹರ್ಲೆ ಕೂಡಿಗೆ-ಕಾಡುಮನೆ ಮುಖ್ಯರಸ್ತೆ ಬಳಿ ಕಾಡುಮನೆಯಿಂದ ದೊಡ್ಡಸಾಗರದವರೆಗಿನ 14 ಕಿ.ಮೀ ಪೈಪ್‌ಲೈನ್‌ನಲ್ಲಿ ನೀರು ಬಿಡಲಾಗಿದೆ. ಆದರೆ ಈ ವೇಳೆ ಭಾರೀ ಪ್ರಮಾಣದಲ್ಲಿ ಸೋರಿಕೆ ಉಂಟಾಗಿ ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ.
ಶುಕ್ರವಾರ ಎರಡನೇ ಬಾರಿಗೆ ಚೆಕ್ ಡ್ಯಾಂ 4 ಮತ್ತು 5 ರಿಂದ ಪ್ರಾಯೋಗಿಕವಾಗಿ ನೀರು ಬಿಡಲಾಗಿತ್ತು. ಪೈಪ್‌ಲೈನ್ ಸೋರಿಕೆಯಿಂದ ನೀರು ನುಗ್ಗಿ ರಸ್ತೆಗಳು ಮತ್ತು ಸಮೀಪದ ಕಾಫಿ ಎಸ್ಟೇಟ್‌ಗೆ ನೀರು ನುಗ್ಗಿದೆ. ಮಲ್ಲಗದ್ದೆ, ದೇಖಲ, ಕುಂಬ್ರಡ್ಡಿ, ಮತ್ತಿತರ ಗ್ರಾಮಗಳ ನಿವಾಸಿಗಳು ಎತ್ತಿನಹೊಳೆ ಯೋಜನೆಯ ವಿವಿಧೆಡೆ ಸೋರಿಕೆಯಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಏಕಾಏಕಿ ನೀರು ಹರಿದು ಬಂದಿದ್ದರಿಂದ ಕೆಲವು ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡಿವೆ. ಹೀಗಾಗಿ ಎತ್ತಿನಹೊಳೆ ಕಾಮಗಾರಿಯ ಗುಣಮಟ್ಟವನ್ನು ಜನರು ಪ್ರಶ್ನಿಸುವಂತೆ ಮಾಡಿದೆ.
ಐದು ದಿನಗಳ ಹಿಂದೆ ಮೊದಲ ಹಂತದ ಪರೀಕ್ಷಾರ್ಥ ಪ್ರಯೋಗದ ವೇಳೆ 6 ಕಿಮೀ ಪೈಪ್‌ಲೈನ್‌ನಲ್ಲಿ ನೀರು ಬಿಟ್ಟಾಗಲೂ ದೊಡ್ಡ ಮಟ್ಟದ ಸೋರಿಕೆ ಕಂಡುಬಂದಿತ್ತು
ಗ್ರಾಮಸ್ಥರ ಪ್ರಕಾರ, “10 ಅಡಿ ಸುತ್ತಳತೆಯ ಭೂಗತ ಪೈಪ್‌ಲೈನ್ ತುಕ್ಕು ಹಿಡಿದಿದೆ. ತುಕ್ಕು ಹಿಡಿಯುವುದನ್ನು ತಡೆಯಲು ಪೈಪ್‌ನ ಸುತ್ತ ಬಳಸಿದ ಸಿಮೆಂಟ್ ಹಲವೆಡೆ ಸವೆದು ಹೋಗಿದೆ. ಎಂಟು ಚೆಕ್ ಡ್ಯಾಂಗಳಿಂದ, 2,000 ಎಚ್‌ಪಿ ಪಂಪ್‌ಗಳಿಂದ ಐದು ಪೈಪ್‌ಲೈನ್‌ಗಳಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ನೀರು ಬಿಟ್ಟರೆ ಪರಿಸ್ಥಿತಿಯನ್ನು ಊಹಿಸಲೂ ಭಯವಾಗುತ್ತದೆ. ಕೆಲವೆಡೆ ನೀರು ಬಿಟ್ಟ ವೇಳೆ ಕಂಪನ ಅನುಭವವಾಗಿದೆ ಎಂದು ವಿವರಿಸಿದ್ದಾರೆ
ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ಮಾತನಾಡಿ, ಸುಮಾರು 5 ರಿಂದ 6 ವರ್ಷಗಳ ಹಿಂದೆ ನೆಲದಡಿ ಪೈಪ್‌ಗಳನ್ನು ಹಾಕಲಾಗಿದೆ. ಹೀಗಾಗಿ ಕೆಲವೆಡೆ ವೆಲ್ಡಿಂಗ್ ಹೊರಬಿದ್ದಿದೆ. ಜತೆಗೆ ತಾಂತ್ರಿಕ ದೋಷದಿಂದ ನೀರು ಸೋರಿಕೆಯಾಗಿದೆ. ಸೋರಿಕೆ ಸಮಸ್ಯೆಗಳು ಮತ್ತು ನೀರಿನ ಹರಿವಿನ ಒತ್ತಡವನ್ನು ಅಧ್ಯಯನ ಮಾಡಲುಪ್ರಯೋಗಗಳನ್ನು ನಡೆಸಲಾಗಿತ್ತು. ಸೋರಿಕೆ ಕಂಡುಬಂದ ತಕ್ಷಣ ನೀರು ಬಿಡುವುದನ್ನು ನಿಲ್ಲಿಸಲಾಗಿದೆ. ರಸ್ತೆಗಳು ಮತ್ತು ಇತರ ಯಾವುದೇ ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ರೀತಿಯ ಸಮಸ್ಯೆಗೆ ಇಲಾಖೆ ತಕ್ಷಣ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.