ಬೆಳಗಾವಿ: ಉತ್ತರ ಕರ್ನಾಟಕದ ಜನರು ಈ ಸರಕಾರ ಮತ್ತು ಅಧಿವೇಶನದಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸರಕಾರ ಅವರ ನಿರೀಕ್ಷೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಬಹಳ ಕಷ್ಟದಲ್ಲಿದ್ದಾರೆ. ರೈತ ಸಮುದಾಯ ಪರಿಹಾರದ ನಿರೀಕ್ಷೆಯಲ್ಲಿದೆ. ರಾಜ್ಯ ಸರಕಾರ ಎಲ್ಲರಿಗೂ ಸಿಹಿ ಸುದ್ದಿ ಕೊಡಲಿ ಎಂದರು.
ಹೊಸ ಸರಕಾರದಿಂದ ಜನರು ಸಾಕಷ್ಟು ನಿರೀಕ್ಷೆಗಳನ್ನು ಮಾಡಿದ್ದರು. ಆದರೆ ದಿನ ಕಳೆದಂತೆ ಎಲ್ಲ ಹುಸಿಯಾಗಿದೆ. ಅಧಿವೇಶನದ ಮೂಲಕವಾದರೂ ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಲಿ ಎಂದು ಹೇಳಿದರು.
ಸದನದ ಒಳಗೆ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಲಿದೆ. ಸಮರ್ಥವಾಗಿ ಜನತೆಯ ನಿರೀಕ್ಷೆಯಂತೆ ಸದನದಲ್ಲಿ ವಿಷಯ ಪ್ರಸ್ತಾಪ ಮಾಡಲಾಗುವದು ಎಂದರು.
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು,ಚುನಾವಣೆಯ ಫಲಿತಾಂಶ ಬಿಜೆಪಿಗೆ ದೊಡ್ಡ ಶಕ್ತಿ ತಂದು ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳನ್ನು ಜನರು ನಂಬುತ್ತಿಲ್ಲ ಎಂದರು.