ಮರಳು ಅಲಭ್ಯ: ಸದನದ ಗಮನ ಸೆಳೆದ ಶಾಸಕ ಕಾಮತ್

ಬೆಳಗಾವಿ: ದಕ್ಷಿಣಕನ್ನಡ ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಆರಂಭಿಸುವ ವಿಚಾರದಲ್ಲಿ ಸರ್ಕಾರದ ಅನಗತ್ಯ ವಿಳಂಬ ನೀತಿಯ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ.ವೇದವ್ಯಾಸ್‌ ಕಾಮತ್‌ ಅವರು ವಿಶೇಷ ಗಮನ ಸೆಳೆದರು.

ಈಗಾಗಲೇ ದುಬಾರಿ ದರದಿಂದಾಗಿ ಜನಸಾಮಾನ್ಯರಿಗೆ ಮರಳು ಕೈಗೆಟುಕದಿದ್ದು, ಇನ್ನೂ ಸಹ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಆರಂಭಗೊಳ್ಳದಿದ್ದರೆ ಕಟ್ಟಡ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಳ್ಳುವ ಆತಂಕವಿದ್ದು, ಇದನ್ನೇ ನಂಬಿ ಬದುಕು ನಡೆಸುವ ಕಾರ್ಮಿಕ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಲಿರುವ ಬಗ್ಗೆ, ಆರ್ಥಿಕವಾಗಿ ಜಿಲ್ಲೆಗೆ ನಷ್ಟ ಉಂಟಾಗುವ ಬಗ್ಗೆ ಹಾಗೂ ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ಮರಳಿನ ಸಮಸ್ಯೆ ಕುರಿತು ಸದನದ ಗಮನ ಸೆಳೆದರು.

ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಹಲವು ತಿಂಗಳುಗಳೇ ಕಳೆದಿದ್ದು ಅದನ್ನು ಮರಳಿ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿರುವ ಏಳು ಜನ ಸದಸ್ಯರನ್ನೊಳಗೊಂಡ ಸಮಿತಿ, ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳ ಸಂಪೂರ್ಣ ವರದಿಯನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಆದರೆ ಇಲ್ಲಿಯವರೆಗೆ ಅನುಮತಿ ದೊರೆತಿಲ್ಲ.

Advertisement

ಸದ್ಯ ಜಿಲ್ಲೆಯಲ್ಲಿ ಯಾವುದೇ ಕಾಮಗಾರಿಗೂ ಕೂಡ ಸಿಆರ್‌ಝಡ್‌ ಮರಳು ಲಭ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದರೆ ಮತ್ತೆ ಹಲವು ತಿಂಗಳುಗಳ ಕಾಲ ಮರಳು ಸಿಗದೇ ತೀವ್ರ ಸಂಕಷ್ಟ ಅನುಭವಿಸಬೇಕಾಗುವ ಸ್ಥಿತಿ ಎದುರಾಗಲಿದೆ.

ಈಗಾಗಲೇ ಜಿಲ್ಲಾಡಳಿತದ ಹಂತದಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಪೂರೈಸಿ ವರದಿಯನ್ನು ಕಳುಹಿಸಲಾಗಿದ್ದರೂ ಇನ್ನೂ ಸಹ ನಿರಾಪೇಕ್ಷಣಾ (EC) ಪತ್ರ ನೀಡದೇ ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಎಂಸ್ಯಾಂಡನ್ನು ರಸ್ತೆ ಅಥವಾ ಇನ್ನಿತರ ಉಪಯೋಗಗಳಿಗಾಗಿ ಮಾತ್ರ ಬಳಸಲಾಗುತ್ತದೆ, ಹೊರತು ಮನೆಗಳ ಕಟ್ಟಡಕ್ಕೆ ಹೆಚ್ಚು ಉಪಯೋಗಿಸುವುದಿಲ್ಲ. ಇದು ಮಾನ್ಯ ಸಭಾಧ್ಯಕ್ಷರಿಗೂ ತಿಳಿದಿರುವ ವಿಚಾರ. ಹಾಗಾಗಿ ಕೂಡಲೇ ನಿರಾಪೇಕ್ಷಣಾ (EC) ಪತ್ರ ನೀಡಿ ಸಾಂಪ್ರದಾಯಿಕ ಮರಳುಗಾರಿಕೆಯ ಆರಂಭಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement