ಶಿವಮೊಗ್ಗ: ಶಬರಿಮಲೆ ಅವ್ಯವಸ್ಥೆಯ ಆಗರವಾಗಿದೆ. ಕೇರಳ ಸರ್ಕಾರ ಈ ಅವ್ಯವಸ್ಥೆಯನ್ನು ಶೀಘ್ರವೇ ಸರಿಪಡಿಸಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶವರಿಮಲೆಯಲ್ಲಿ ಭಕ್ತರ ನೂಕುನುಗ್ಗಲಿಗೆ 8 ವರ್ಷದ ಮಗು ಜೀವಕಳೆದುಕೊಂಡಿದೆ. ಹಾಗೇ ರಸ್ತೆ ಬದಿಯಲ್ಲಿ ಮಲಗಿದ್ದ ಯುವಕನೋರ್ವನ ಮೇಲೆ ಬಸ್ ಹರಿದು ಆತನ ಕಾಲು ಊನವಾಗಿದೆ. ಜೊತೆಗೆ ಕೇರಳ ಸರ್ಕಾರವು ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ನಾನೂ ಕೂಡ ಎರಡು ಬಾರಿ ಶಬರಿಮಲೆಗೆ ಹೋಗಿದ್ದೆ. ಆಗ ಈ ರೀತಿಯ ಸಮಸ್ಯೆಗಳಿರಲಿಲ್ಲ. ಈಗ ಬೇಕೆಂದೇ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಕೇರಳ ಸರ್ಕಾರ ಈ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರ ಮಾಡಬೇಕು. ಒಂದು ವೇಳೆ ಸಮಸ್ಯೆಗಳನ್ನು ಪರಿಹರಿಸದೇ ಇದ್ದಲ್ಲಿ ರಾಜ್ಯದ ಅಯ್ಯಪ್ಪ ಭಕ್ತರು ಸೇರಿ ಕೇರಳದಲ್ಲಿ ದೊಡ್ಡ ಮಟ್ಟದ ಆಂದೋಲನ ನಡೆಸಬೇಕಾಗುತ್ತದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಈಶ್ವರಪ್ಪ ಆಗ್ರಹಿಸಿದರು.