ಮಂಗಳೂರು: ತೆವಲಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನರೊಬ್ಬರ ಮೇಲೆ ಕಾರೊಂದು ಹರಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಡಬದ ಮುಖ್ಯ ಪೇಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಡಬದ ಅಂಗಡಿ ಮನೆ ನಿವಾಸಿ ಧರ್ನಪ್ಪ ಎಂದು ಗುರುತಿಸಲಾಗಿದೆ. ಮೃತರು ವಿಕಲಚೇತನರಾಗಿದ್ದು, ಶುಕ್ರವಾರ ಸಾಯಂಕಾಲ ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರ ಸಹೋದರ ನೀಡಿದ ದೂರಿನಂತೆ ಕಾರು ಚಾಲಕನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.