ನವದೆಹಲಿ: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ಸಂಬಂಧ ವರದಿ ಪಡೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪಟ್ಟಿ ಪರಿಶೀಲನೆ ಮಾಡಿ ಎರಡು ಮೂರು ದಿನದಲ್ಲಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ನಿಗಮ ಮಂಡಳಿ ಆಯ್ಕೆ ಸಂಬಂಧ ಬುಧವಾರ ಎಐಸಿಸಿ ಕಚೇರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ , ಸಂಸದ ರಾಹುಲ್ ಗಾಂಧಿ , ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು.
ಸಭೆಯಲ್ಲಿ ಮೊದಲ ಹಂತದಲ್ಲೆ ಕೆಲವು ಹಿರಿಯ ನಾಯಕರು ಮತ್ತು ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ರಾಹುಲ್ ಗಾಂಧಿ ಹಾಗೂ ಕೆ.ಸಿ ವೇಣುಗೋಪಾಲ್ ಸಲಹೆ ನೀಡಿದರು ಎನ್ನಲಾಗಿದೆ. ಈ ವಿಚಾರದಲ್ಲಿ ಒಮ್ಮತ ಮೂಡದ ಹಿನ್ನೆಲೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಯ ಬೇಕು ಎಂದು ಸಿಎಂಗೆ ಖರ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಸಭೆಯ ಬಳಿಕ ಮಾತನಾಡಿದ ಸಿಎಂ , ನಾವು ಕಳುಹಿಸಿದ ಪಟ್ಟಿಯನ್ನು ಇನ್ನು ವರಿಷ್ಠರು ನೋಡಿಲ್ಲ. ನೋಡಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ. ಎರಡು ಮೂರು ದಿನದಲ್ಲಿ ಹೈಕಮಾಂಡ್ ನಾಯಕರು ಪ್ರತಿಕ್ರಿಯೆ ನೀಡಬಹುದು. ಆ ಬಳಿಕ ಪಟ್ಟಿ ಬಿಡುಗಡೆ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.