‘ಯುವನಿಧಿ ಯೋಜನೆʼ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ಸಿಎಂ

ಬೆಂಗಳೂರು: ಸರ್ಕಾರದ 5ನೇ ಗ್ಯಾರಂಟಿ‌ ʼಯುವನಿಧಿ ಯೋಜನೆʼನೋಂದಣಿ ಪ್ರಕ್ರಿಯೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಸಿಎಂ ಮತ್ತು ಗಣ್ಯರು, ಓರ್ವ ಯುವತಿ ಹಾಗೂ ಯುವಕನನ್ನ ವೇದಿಕೆ ಮೇಲೆ ಕರೆಸಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

ಬಳಿಕ ಸಿಎಂ ಹಾಗೂ ಡಿಸಿಎಂ ಯುವನಿಧಿ ಯೋಜನೆ ಪೋಸ್ಟರ್ ಬಿಡುಗಡೆ ಮಾಡಿದರು. ಇದೇ ವೇಳೆ ಸಿಎಂ ಅವರು ಯುವನಿಧಿ ಯೋಜನೆಯ ಲೋಗೋ ಬಿಡುಗಡೆ ಮಾಡಿದರು. ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

Advertisement

ಸಚಿವ ಶರಣು ಪ್ರಕಾಶ್ ಪಾಟೀಲ್ ಮಾತನಾಡಿ, ಚುನಾವಣೆ ಮುನ್ನ 5 ಗ್ಯಾರಂಟಿ ಯೋಜನೆ ಬಗ್ಗೆ ವಾಗ್ದಾನ ಮಾಡಲಾಗಿತ್ತು. ಭಾರತದ ಇತಿಹಾಸದಲ್ಲಿ ನಮ್ಮ ಸರ್ಕಾರ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಸಿಎಂ ಅವರು ಮೊದಲ ಸಂಪುಟದಲ್ಲಿ 5 ಗ್ಯಾರಂಟಿಗಳಿಗೆ ಒಪ್ಪಿಗೆ ಕೊಟ್ಟರು. ಇದು ಐತಿಹಾಸಿಕ ನಿರ್ಣಯ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಜನರಿಗೆ ಕೊಟ್ಟ ಮಾತಿನಂತೆ 4 ಗ್ಯಾರಂಟಿ ಕಾರ್ಯಗತ ಮಾಡಿದ್ದೇವೆ‌. ಇಂದು 5ನೇ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದರು.

ನಮ್ಮ ಗ್ಯಾರಂಟಿ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿದೆ. ನಮ್ಮ ಸರ್ಕಾರ ಬಡವರ ಮನೆಗೆ ಬೊಕ್ಕಸದ ಬಹುಪಾಲು ಹಣ ಕೊಡುತ್ತಿದ್ದೇವೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಇವೆಲ್ಲವೂ ಜಾರಿ ಆಗಿದೆ. ಮಾತು ಕೊಟ್ಟಂತೆ ನಡೆದಿದ್ದೇವೆ. ವಿಪಕ್ಷಗಳು ವಿಳಂಬ ಆಯ್ತು ಅಂತಾರೆ. ಆದರೆ ವಿಳಂಬವಾಗಿಲ್ಲ. ನಾವು ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಜಾರಿ ಮಾಡ್ತಿದ್ದೇವೆ. ಯುವನಿಧಿ ದೇಶದಲ್ಲಿ ವಿಶೇಷ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಯುವಕ-ಯುವತಿಯರ ನೆರವಿಗಾಗಿ ಸರ್ಕಾರ ಬಂದಿದೆ. 2022-23 ರಲ್ಲಿ ಪಾಸ್ ಆಗಿರೋರು ಸೇವಾಸಿಂಧು, ಕರ್ನಾಟಕ ಒನ್, ಬೆಂಗಳೂರು ಒನ್ ನಲ್ಲಿ ಉಚಿತವಾಗಿ ರಿಜಿಸ್ಟರ್ ಮಾಡಿಕೊಳ್ಳಬಹುದು. ಯುವಕರಿಂದ ನಾವು ಯಾವುದೇ ಕೆಲಸ ಇಲ್ಲ ಅಂತ ಸೆಲ್ಫ್ ಡಿಕ್ಲರೇಷನ್‌ ಮಾತ್ರ ಕೇಳಿದ್ದೇವೆ. 5 ಲಕ್ಷ 20 ಸಾವಿರ ಯುವಕ-ಯುವತಿಯರು ಇದರ ಲಾಭ ಪಡೆಯಲಿದ್ದಾರೆ. ಎರಡು ವರ್ಷಗಳ ಕಾಲ ಹಣ ಕೊಡಲಿದ್ದೇವೆ. ಹಣದ ಜೊತೆ ರಿಜಿಸ್ಟರ್ ಆಗೋರಿಗೆ ಸ್ಕಿಲ್ ಕೊಡುವ ಪ್ರಯತ್ನ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಅದರಂತೆ ಯುವಕ-ಯುವತಿಯರಿಗೆ ಸ್ಕಿಲ್ ತರಬೇತಿ ಕೊಡ್ತಿದ್ದೇವೆ ಎಂದರು.

ನಮ್ಮ ‌ಇಲಾಖೆಯಲ್ಲಿ ಕಲಿಕೆ ಜೊತೆ ಕೌಶಲ್ಯ ಜಾರಿ ಮಾಡ್ತಿದ್ದೇವೆ. ಕಂಪನಿಗಳಲ್ಲಿ ಖಾಲಿ ಇರೋ ಹುದ್ದೆಗೆ ಬೇಕಾದ ಸ್ಕಿಲ್ ಟ್ರೈನಿಂಗ್ ಕೊಡುವ ಕೆಲಸ ಮಾಡ್ತಿದ್ದೇವೆ. ಸ್ಕಿಲ್ ಅಥಾರಿಟಿ ಸ್ಥಾಪನೆ ಮಾಡೋ ಕೆಲಸ ಮಾಡ್ತಿದ್ದೇವೆ. ಈ ರಾಜ್ಯದ ಜನ ಇಟ್ಟ ಭರವಸೆ ಈಡೇರಿಸೋ ಕೆಲಸ ಮಾಡ್ತೀವಿ. ಜನ ಪರವಾದ ಕೆಲಸ ಮಾಡ್ತೀವಿ. ಜನವರಿ 12 ರಂದು ವಿವೇಕಾನಂದ ಜಯಂತಿ ದಿನ ಶಿವಮೊಗ್ಗದಲ್ಲಿ ಫಲಾನುಭವಿಗಳ ಖಾತೆಗೆ ಹಣ ಹಾಕ್ತೀವಿ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಸಚಿವರಾದ ಶರಣು ಪ್ರಕಾಶ್ ಪಾಟೀಲ್, ಸುಧಾಕರ್, ನಾಗೇಂದ್ರ, ಪ್ರಿಯಾಂಕ್ ಖರ್ಗೆ ಸೇರಿ ಹಲವು ಭಾಗಿಯಾಗಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement