ಕರಾವಳಿಯ ಯಕ್ಷಗಾನದಲ್ಲಿ ‘ಶ್ರೀದೇವಿ ಮಹಾತ್ಮೆ’ ಪ್ರಸಂಗ ಯಾಕಷ್ಟು ಪ್ರಸಿದ್ಧಿ ಗೊತ್ತಾ?

ಮಂಗಳೂರು:  ಸದ್ಯ ಕರಾವಳಿಯಲ್ಲಿ ಯಕ್ಷಗಾನದ್ದೇ ಕಲರವ ಜೋರಾಗಿದೆ. ರಾತ್ರಿಯಾಗುತ್ತಿದ್ದಂತೆ ಕಾಸರಗೋಡಿನಿಂದ ಉತ್ತರ ಕರ್ನಾಟಕದವರೆಗೆ ಒಂದಿಲ್ಲೊಂದು ಕಡೆಗಳಲ್ಲಿ ಚಂಡೆ – ಮದ್ದಳೆ – ಭಾಗವತಿಕೆಯ ನಿನಾದ ಕೇಳುತ್ತಲೇ ಇರುತ್ತದೆ. ದಿನನಿತ್ಯವೂ ನೂರಾರು ಪುರಾಣ ಪ್ರಸಂಗಗಳು ಯಕ್ಷಗಾನ ಕಥಾನಕಗಳಾಗಿ ರಾತ್ರಿಯಿಡೀ ಪ್ರದರ್ಶನಗೊಳ್ಳುತ್ತಿರುತ್ತದೆ.

ತೆಂಕುತಿಟ್ಟಿನ ಕಟೀಲು ಮೇಳವೊಂದೇ ಈ ಪ್ರಸಂಗವನ್ನು ದಾಖಲೆ ಬರೆಯುವಷ್ಟು ಆಡಿ ತೋರಿಸಿದ್ದಾರೆ. ಅಲ್ಲದೆ ಸದ್ಯ ತೆಂಕು – ಬಡಗು ಎಂದು 40-50ರಷ್ಟಿರುವ ಮೇಳಗಳು ಈ ಪ್ರಸಂಗವನ್ನು ಸಾಕಷ್ಟು ಬಾರಿ ಪ್ರದರ್ಶನ ಮಾಡುತ್ತಲೇ ಇರುತ್ತದೆ. ಸಂಘಟಕರು, ಸೇವಾಕರ್ತರು ಸೇರಿದಂತೆ ಕೆಲ ಭಕ್ತರು ಈ ಪ್ರಸಂಗವನ್ನು ಪ್ರತೀ ವರ್ಷವೂ ಆಡಿಸುತ್ತಿರುತ್ತಾರೆ. ಹೀಗೆ 50 ವರ್ಷಗಳಿಂದ ಬರೀ ದೇವಿ ಮಹಾತ್ಮೆ ಪ್ರಸಂಗವನ್ನೇ ಆಡಿಸಿದವರಿದ್ದಾರೆ‌.

ಮನೆ ನಿರ್ಮಾಣ, ಸಂತಾನಪೇಕ್ಷೆ, ಇನ್ನೇನು ಕಾರಣಕ್ಕೆ ಹರಕೆಯ ರೂಪದಲ್ಲಿ ಈ ಪ್ರಸಂಗವನ್ನು ಆಡಿಸುವವರಿದ್ದಾರೆ. ಇದಕ್ಕೆ ಶ್ರೀದೇವಿ ಮಹಾತ್ಮೆ ಎಂಬ ಪ್ರಸಂಗದ ಹಿಂದಿರುವ ಆಸ್ತಿಕರ ಭಕ್ತಿಯೇ ಕಾರಣವೆಂದರೆ ಅತಿಶಯೋಕ್ತಿಯಲ್ಲ.

Advertisement

ಪ್ರಸಂಗದಲ್ಲಿ ಶ್ರೀದೇವಿಯ ಆವಿರ್ಭಾವ, ಮಹಿಷಾಸುರನ ವಧೆ, ದೇವಿ ಕೌಶಿಕೆಯಾಗಿ ಉಯ್ಯಾಲೆಯಲ್ಲಿ ಕುಳಿತು ತನ್ನ ಲೀಲಾ ವಿಲಾಸವನ್ನು ತೋರಿ ರಾಕ್ಷಸ ಗಡಣವನ್ನು ಕೊಲ್ಲುವುದನ್ನು ಪ್ರೇಕ್ಷಕರು ಬರೀ ಪ್ರದರ್ಶನವೆಂದು ನೋಡದೆ ಭಕ್ತಿಯಿಂದ ಆಸ್ವಾದಿಸುತ್ತಾರೆ. ದೇವಿ ಮಹಾತ್ಮೆ ಪ್ರಸಂಗದ ಹಿಂದೆಯೂ ಒಂದಷ್ಟು ನಂಬಿಕೆಗಳಿದೆ. ಈಗಲೂ ಕಟೀಲು ಪರಿಸರದಲ್ಲಿ, ಪೊಳಲಿ ಪ್ರದೇಶದಲ್ಲಿ, ಬಪ್ಪನಾಡಿನ ಗದ್ದೆಯಲ್ಲಿ ಈ ಪ್ರಸಂಗ ಪ್ರದರ್ಶಿಸುವಂತಿಲ್ಲ. ಪ್ರದರ್ಶನಗೊಂಡಲ್ಲಿ ಏನಾದರೂ ಅವಘಡ ಸಂಭವಿಸುತ್ತದೆ ಎಂಬ ಭೀತಿಯಿದೆ.

ದುರ್ಗಾಸಪ್ತಶತಿಯ ಶ್ರೀದೇವಿ ಮಹಾತ್ಮೆಯ ಕಥೆಯನ್ನು ಯಕ್ಷಗಾನ ಪ್ರಸಂಗವಾಗಿ ಮೊದಲಾಗಿ ರಚಿಸಿದವನು ದೇವಿದಾಸನೆಂಬ ಕವಿ. ಆ ಬಳಿಕ ಹತ್ತಾರು ಯಕ್ಷಗಾನ ಕವಿಗಳು ಈ ಪ್ರಸಂಗವನ್ನು ರಚಿಸಿದ್ದಾರೆ. ಹಾಗಾಗಿ ದೇವಿ ಮಹಾತ್ಮೆ ಎಂಬ ಪ್ರಸಂಗದ ಹತ್ತರಷ್ಟು ಪ್ರಸಂಗ ಪಠ್ಯಗಳು ಇದೆ ಎನ್ನುವುವುದಂತೂ ಸ್ಪಷ್ಟ.

ಶ್ರೀದೇವಿ ಮಹಾತ್ಮೆ ಪ್ರಸಂಗ ಮೊಟ್ಟಮೊದಲು ಪ್ರದರ್ಶನಗೊಂಡದ್ದು 1930ರಲ್ಲಿ ಕಾಸರಗೋಡು ಸಮೀಪದ ಕೊರಕ್ಕೋಡು ಎಂಬಲ್ಲಿ. ಅಂದು ಈ ಪ್ರಸಂಗವನ್ನು ಮಾಂಬಾಡಿ ನಾರಾಯಣ ಭಾಗವತರು ಈ ಪ್ರಸಂಗವನ್ನು ಆಡಿಸಿದ್ದರು ಎಂದು ತಿಳಿದು ಬರುತ್ತದೆ. ಆ ಬಳಿಕ 1941ರಲ್ಲಿ ಕಿನ್ನಿಗೋಳಿಯಲ್ಲಿ ಈ ಪ್ರಸಂಗವನ್ನು ಅವರೇ ಆಡಿಸಿದ್ದರಂತೆ. ವಿಶೇಷವೆಂದರೆ ಮೊದಲ ಪ್ರದರ್ಶನ ಏಳು ದಿನದ್ದಾದರೆ, ಎರಡನೇ ಪ್ರದರ್ಶನ ಐದು ದಿನಗಳದ್ದು.

ಆ ಬಳಿಕ ಹಿರಿಯ ಬಲಿಪ ನಾರಾಯಣ ಭಾಗವತರು ಹಾಗೂ ಅಗರಿ ಶ್ರೀನಿವಾಸ ಭಾಗವತರು ಒಂದು ರಾತ್ರಿ ಬೆಳಗಾಗುವ ಕಾಲಕ್ಕೆ ಬೇಕಾಗುವಷ್ಟು ಸಂಕ್ಷೇಪಿಸಿ ಪ್ರಸಂಗ ರಚಿಸಿದ್ದಾರೆ. ಸದ್ಯ ಇವರಿಬ್ಬರು ಬರೆದಿರುವ ಪ್ರಸಂಗ ಪಠ್ಯವೇ ಪ್ರದರ್ಶನಗೊಳ್ಳುತ್ತಿದೆ. ಒಟ್ಟಿನಲ್ಲಿ ಪ್ರಸಕ್ತ ಕಾಲಘಟ್ಟದಲ್ಲಿ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನ ಕಲೆಯಾಗಿ ಉಳಿಯದೆ, ಆರಾಧನಾ ಸ್ವರೂಪವಾಗಿ ಬದಲಾಗಿದೆ. ಇದಕ್ಕೆ ಕರಾವಳಿಯ ಜನರ ಭಕ್ತಿಯ ಶಕ್ತಿಯೇ ಕಾರಣವಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement