ಉಗ್ರವಾದಕ್ಕೆ ಯುವಕರ ಬ್ರೇನ್​ವಾಶ್, ಐಸಿಸ್ ಟ್ವಿಟರ್ ಹ್ಯಾಂಡ್ಲರ್ ಮೆಹ್ದಿ ದೋಷಿ, ಇಂದು ಶಿಕ್ಷೆ ಪ್ರಕಟ..!

ಬೆಂಗಳೂರು: ಉಗ್ರವಾದಕ್ಕೆ ಯುವಕರ ಬ್ರೇನ್ ವಾಶ್ ಮಾಡುತ್ತಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾದ (ಐಸಿಸ್) ಟ್ವಿಟರ್ ಖಾತೆ ನಿರ್ವಾಹಕ, ಬಂಧಿತ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್ ದೋಷಿ ಎಂದು ಎನ್​ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು , ಇಂದು ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

2012ರಲ್ಲಿ ಐಸಿಸ್ ಪರವಾಗಿ ‘ಶಮ್ಮಿವಿಟ್ನೆಸ್’ ಟ್ವಿಟರ್ ಅಕೌಂಟ್ ತೆರೆದು ಉಗ್ರರು ನಡೆಸುತ್ತಿದ್ದ ರಕ್ತಪಾತ, ಉಗ್ರವಾದವನ್ನು ಪ್ರಚಾರ ಮಾಡಿ ಯುವಜನರಿಗೆ ಐಸಿಸ್ ಸಂಘಟನೆಗೆ ಸೇರುವಂತೆ ಮೆಹ್ದಿ ಪ್ರಚೋದನೆ ನೀಡುತ್ತಿದ್ದ. ಈ ಬಗ್ಗೆ ಇಂಗ್ಲೆಂಡ್ ಮಾಧ್ಯಮ ಸುದ್ದಿ ಪ್ರಸಾರ ಮಾಡಿತ್ತು. ಇದರ ಮೇರೆಗೆ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು, 2014 ಡಿ.13ರಂದು ಜಾಲಹಳ್ಳಿಯ ಸಿದ್ಧಾರ್ಥನಗರದಲ್ಲಿ ಮೆಹ್ದಿಯನ್ನು ಬಂಧಿಸಿದ್ದರು. ಐಪಿಸಿ ಸೆಕ್ಷನ್ 121 (ಭಾರತ ಸರ್ಕಾರದ ವಿರುದ್ಧ ಯುದ್ಧ ಘೋಷಣೆ ಅಥವಾ ಪ್ರಯತ್ನ ನಡೆಸಲು ಪ್ರೋತ್ಸಾಹ), ಐಪಿಸಿ ಸೆಕ್ಷನ್ 125 (ಭಾರತದ ಸ್ನೇಹ ಪೂರ್ವಕವಾಗಿರುವ ರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಪ್ರಚೋದನೆ ನೀಡಿದ ಆರೋಪ) ಹಾಗೂ 153-ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ ಮತ್ತು ಭಾಷೆ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ ನೀಡುವುದು ಹಾಗೂ ಶಾಂತಿ ಕದಡುವುದು) ಆರೋಪದಡಿ 36,986 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದರು.
ಬಿಸ್ವಾಸ್​ಗೆ ಐಪಿಸಿ ಸೆಕ್ಷನ್ 121ರ ಅಪರಾಧದಿಂದ ಖುಲಾಸೆಗೊಳಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಯುಎಪಿಎ ಸೆಕ್ಷನ್​ಗಳು, ಭಯೋತ್ಪಾದಕ ಕೃತ್ಯಗಳಿಗೆ ನೇಮಕಾತಿ ಮತ್ತು ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವುದು ಸೇರಿ ಇತರ ಆರೋಪಗಳಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ.
ಶಮ್ಮಿವಿಟ್ನೆಸ್ ಖಾತೆಗೆ 18 ಸಾವಿರ ಬೆಂಬಲಿಗರಿದ್ದರು. 1.25 ಲಕ್ಷ ಟ್ವಿಟ್ ಮಾಡಿದ್ದ. ಮೂಲಕ ಹೆಚ್ಚು ಹೆಚ್ಚು ಮಂದಿಯನ್ನು ಸಂರ್ಪಸಿ ಐಸಿಸ್ ಸಂಘಟನೆಗೆ ಸೇರ್ಪಡೆ ಮಾಡುವುದು ಮೆಹ್ದಿ ಉದ್ದೇಶವಾಗಿತ್ತು. ಪುಣೆ ಮೂಲದ ಉಗ್ರ ಕಳುಹಿಸುತ್ತಿದ್ದ ಸಂದೇಶಗಳನ್ನು ಪಡೆದು ಮೆಹ್ದಿ ಟ್ವಿಟ್ ಮಾಡುತ್ತಿದ್ದ. ಇರಾಕ್​ನಲ್ಲಿರುವ ಉಗ್ರರು ಮತ್ತು ಐಸಿಸ್ ಬೆಂಬಲಿಗರು ಮೆಹ್ದಿ ಸಂದೇಶಗಳನ್ನು ನೋಡಿ ತಮ್ಮ ಮೇಲೆ ಸಾವಿರಾರು ಮಂದಿಗೆ ಕಾಳಜಿ ಇದೆ ಎಂದು ತಿಳಿಯುತ್ತಿದ್ದರು. ಇರಾಕ್​ನ ವ್ಯಕ್ತಿಯೇ ಟ್ವಿಟರ್ ನಿರ್ವಹಣೆ ಮಾಡುತ್ತಿದ್ದ ಎಂಬುದು ಉಗ್ರರ ನಂಬಿಕೆಯಾಗಿತ್ತು.

ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್ ಮುಸ್ಲಿಮಿನ್(ಜೆಎನ್​ಐಎಂ) ಅನ್ನು ಮೆಹ್ದಿ ಬೆಂಬಲಿಸುತ್ತಿದ್ದ. ಐಸಿಸ್ ಹೆಚ್ಚು ಜನಪ್ರಿಯವಾದಾಗ, ಅದನ್ನು ಮೆಹ್ದಿ ಬೆಂಬಲಿಸಲು ಪ್ರಾರಂಭಿಸಿದ. ಸಿರಿಯಾ ಮತ್ತು ಇತರ ದೇಶಗಳ ಶಂಕಿತರು ಎನ್ನಲಾದ 88 ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ ಎಂಬುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement