ಜನಸ್ಪಂದನ ಕಾರ್ಯಕ್ರಮ: ವಿಧಾನಸೌಧದತ್ತ ಅಹವಾಲು ಹೊತ್ತ ಜನರ ಆಗಮನ

ಬೆಂಗಳೂರು: ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ. ಇಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ತನಕ ಜನಸ್ಪಂದನ ನಡೆಯಲಿದೆ‌. ಜನಸ್ಪಂದನ ಕಾರ್ಯಕ್ರಮಕ್ಕೆ ವಿಧಾನಸೌಧದಲ್ಲಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ. ಮುಂಜಾನೆಯಿಂದಲೇ ಜನಸ್ಪಂದನ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ಮನವಿಗಳನ್ನು ಹೊತ್ತು ಆಗಮಿಸುತ್ತಿದ್ದಾರೆ.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಸಿಎಂ ಜನಸ್ಪಂದನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೃಹತ್ ಜರ್ಮನ್ ಟಂಟ್ ಹಾಕಲಾಗಿದ್ದು,10 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದೆ. 20 ಬೃಹತ್ ಎಲ್ ಇಡಿ ಸ್ಕ್ರೀನ್ ಅಳವಡಿಸಿದ್ದಾರೆ.

ಸಾರ್ವಜನಿಕರು ಆಧಾರ್ ಅಥವಾ ಪಡಿತರ ಕಾರ್ಡ್ ನೊಂದಿಗೆ ಬಂದು ರಿಜಿಸ್ಟರ್ ಮಾಡಿಕೊಳ್ಳಬೇಕು. ರಿಜಿಸ್ಟರ್ ಮಾಡಿಕೊಳ್ಳುವಾಗ ಯಾವ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಎಂದು ನೋಡಿ ಆ ಇಲಾಖೆಯ ಕೌಂಟರ್ ನಂಬರ್ ಕೊಡಲಾಗುತ್ತೆ. ಆ ಕೌಂಟರ್ ನಂಬರ್ ಬಳಿ ಹೋಗಿ ತಮ್ಮ ಮನವಿಯನ್ನ ಸಾರ್ವಜನಿಕರು ಕೊಡಬಹುದು‌. ಇದಕ್ಕಾಗಿ 36 ವಿವಿಧ ಇಲಾಖೆಯ ಕೌಂಟರ್ ಗಳನ್ನ ತೆರೆಯಲಾಗಿದೆ. ಕೌಂಟರ್ ಗಳಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೇ ಖುದ್ದು ಸಾರ್ವಜನಿಕ ಮನವಿ ಸ್ವೀಕರಿಸಲಿದ್ದಾರೆ. ಬಳಿಕ ಸಿಎಂ‌ ಸಿದ್ದರಾಮಯ್ಯನವರೇ ಖುದ್ದು ಆ ಕೌಂಟರ್ ಗಳಿಗೆ ತೆರಳಿ ಅರ್ಜಿಯನ್ನ ನೋಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ಇರಲು ಸೂಚಿಸಲಾಗಿದೆ.

Advertisement

ಹಿರಿಯ ನಾಗರಿಕರು: ವಿಕಲಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ

ವಯೋವೃದ್ಧರು / ಹಿರಿಯ ನಾಗರಿಕರು / ವಿಕಲಚೇತನರು / ಗರ್ಭಿಣಿಯರಿಗಾಗಿ Battery ಚಾಲಿತ buggy/Wheel Chairs ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು ಸಂಬಂಧಿಸಿದ ಇಲಾಖೆಯ ಸ್ಟಾಲ್‌ ಗೆ ಅವರನ್ನು ಕರೆದೊಯ್ಯುವ ವ್ಯವಸ್ಥೆಯಾಗಿದೆ.

ಊಟದ ವ್ಯವಸ್ಥೆ

ಜನತಾದರ್ಶನಕ್ಕೆ ಆಗಮಿಸುವ ನಾಗರಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಐದರಿಂದ ಹತ್ತು ಸಾವಿರ ಜನರಿಗೆ ಆಹಾರ ಪೂರೈಸುವಂತಹ ವ್ಯವಸ್ಥೆಯಾಗಿದೆ.

ಶೌಚಾಲಯ ವ್ಯವಸ್ಥೆ

ಜನತಾದರ್ಶನಕ್ಕೆ ಬರುವ ಎಲ್ಲಾ ಸಾರ್ವಜನಿಕರು ಹಾಗೂ ದಿವ್ಯಾಂಗರಿಗೆ ಸ್ವಚ್ಛ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಸಾರಿಗೆ ವ್ಯವಸ್ಥೆ

ಜನಸ್ಪಂದನಾ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬಿಎಂಟಿಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
3738 ಅರ್ಜಿ ವಿಲೇವಾರಿ
ನವೆಂಬರ್ 27 ರಂದು ನಡೆದ ಜನತಾ ದರ್ಶನದಲ್ಲಿ 4030 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈವರೆಗೆ 3738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಒಟ್ಟಾರೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸುಗಮವಾಗಿ ಪರಿಹಾರವನ್ನು ಪಡೆಯಲು ಜನಸ್ಪಂದನ ಕಾರ್ಯಕ್ರಮ ನೆರವಾಗಲು ಭರದ ಸಿದ್ಧತೆ ನಡೆದಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement