ಚಿತ್ರದುರ್ಗ : ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಚಿತ್ರೀಕರಣ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೊರಗುತ್ತಿಗೆ ವೈದ್ಯ ಡಾ. ಅಬಿಷೇಕ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಆದೇಶಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ. ಅಬಿಷೇಕ್ ಅವರು ಭರಮಸಾಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕಳೆದ ಫೆ 07 ರಂದು ಪ್ರೀ ವೆಡ್ಡಿಂಗ್ ಶೂಟ್ ಮಾಡಿರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಇಂತಹ ಕಾರ್ಯವು ನಿಯಮ ಬಾಹಿರವಾಗಿದ್ದು, ವೈದ್ಯರು ಕರ್ತವ್ಯ ಲೋಪವೆಸಗಿರುತ್ತಾರೆ. ಹೀಗಾಗಿ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳ ವರದಿಯನ್ವಯ ಡಾ. ಅಭಿಷೇಕ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ತಿಳಿಸಿದ್ದಾರೆ.