ಬೆಂಗಳೂರು: ಬಿಲ್ ಪಾವತಿ ಮಾಡುವುದಕ್ಕೆ ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಪಡೆಯಲಾಗಿದೆ ಎಂಬ ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅವರ ಏಕ ವ್ಯಕ್ತಿ ಆಯೋಗದ ಮುಂದೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ತಿಳಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಕರ್ನಾಟಕ ಸರ್ಕಾರ ರಚಿಸಿರುವ ನಾಗಮೋಹನ್ ದಾಸ್ ಅವರ ಏಕ ವ್ಯಕ್ತಿ ಆಯೋಗ ರಚನೆ ಪ್ರಶ್ನಿಸಿ ಮೆರ್ಸಸ್ ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್ಸ್ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇನ್ನು ಮುಂದಿನ ವಿಚಾರಣೆಯ ವೇಳೆಗೆ ಸಮಿತಿಯ ಮುಂದೆ ಇದುವರೆಗೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ ಎಂಬುದರ ಕುರಿತು ತಿಳಿಸಬೇಕು. ಒಂದೊಮ್ಮೆ ಪ್ರಕ್ರಿಯೆ ನಡೆಯದಿರುವುದನ್ನು ಸಮರ್ಥನೆ ಮಾಡದಿದ್ದರೆ ಅರ್ಜಿದಾರರ ಕೋರಿಕೆಯಂತೆ ಸೂಕ್ತ ಆದೇಶ ಮಾಡಲಾಗುವುದು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.