ದೆಹಲಿ : ಅವಾಸ್ತವಿಕ ಭರವಸೆಗಳನ್ನು ನೀಡಿ ರಾಜ್ಯ ಸರ್ಕಾರಗಳು ಖಜಾನೆ ಖಾಲಿ ಮಾಡಿಕೊಂಡರೆ ಅದಕ್ಕೆ ಕೇಂದ್ರ ಸರ್ಕಾರದಿಂದ ಸಹಾಯ ಸಿಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಈ ಮೂಲಕ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದ ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳ ಸರ್ಕಾರ ರಾಜ್ಯ ಸರ್ಕಾರಗಳಿಗೆ ತಿರುಗೇಟು ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅನುದಾನ ಹಂಚಿಕೆ ಕುರಿತ ಆರೋಪಗಳ ಬಗ್ಗೆ ಪ್ರಶ್ನಿಸಿದಾಗ, ‘ಎಲ್ಲಾ ರಾಜ್ಯಗಳು ತಮ್ಮ ಬಜೆಟ್ ಸಿದ್ಧಪಡಿಸುವಾಗ ಅಭಿವೃದ್ಧಿ ಯೋಜನೆಗಳು ಮತ್ತು ಸಾಮಾಜಿಕ ಬದ್ಧತೆಯ ಯೋಜನೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಕೆಲವು ರಾಜ್ಯಗಳು ತಮ್ಮ ಬೊಕ್ಕಸವನ್ನೇ ಬರಿದು ಮಾಡಿಕೊಂಡು ವೇತನ ನೀಡಲೂ ಆಗದ ಪರಿಸ್ಥಿತಿ ನಿರ್ಮಾಣ ಆಗುವ ರೀತಿಯ ಭರವಸೆ ನೀಡಿದರೆ ಆಗ ಕೇಂದ್ರ ಸರ್ಕಾರ ಯಾವುದೇ ಸಹಾಯ ಮಾಡಲಾಗದು’ ಎಂದು ಹೇಳಿದರು.
ಈ ಬಗ್ಗೆ ‘ಇತ್ತೀಚೆಗೆ ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಶ್ವೇತಪತ್ರದಲ್ಲಿ ರಾಜ್ಯಗಳಿಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಅನುದಾನ ಹಂಚಿಕೆಗೆ ಬಳಸುವ ಮಾನದಂಡ ಏನು? ಕಾಂಗ್ರೆಸ್ ಆಡಳಿತದಲ್ಲೂ ಹೇಗೆ ರಾಜ್ಯಗಳಿಗೆ ಅನುದಾನ ಹಂಚಿಕೆಯಾಗಿತ್ತು ಎಂಬುದನ್ನು ವಿವರಿಸಲಾಗಿದೆ’ ಎಂದು ವಿಪಕ್ಷಗಳ ಆಡಳಿತದ ರಾಜ್ಯ ಸರ್ಕಾರಗಳು ಮಾಡಿದ ತಾರತಮ್ಯದ ಆರೋಪಕ್ಕೆ ತಿರುಗೇಟು ನೀಡಿದರು. ಅಲ್ಲದೆ, 15ನೇ ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ಹೆಚ್ಚಿನ ಅನುದಾನ ಸಿಗುವಂತೆ ನೋಡಿಕೊಂಡಿದ್ದೇ ಪ್ರಧಾನಿ ನರೇಂದ್ರ ಮೋದಿ. ಈ ವಿಷಯ ಎಲ್ಲರಿಗೂ ಗೊತ್ತಿದೆ ಎಂದು ಅಮಿತ್ ಶಾ ಹೇಳಿದರು.