‘ಬಿಜೆಪಿ, ಜೆಡಿಎಸ್‌ ಗ್ಯಾರಂಟಿ ಯೋಜನೆಯ ಫಲಾನುಭವಿಗಳು, ಆದರೆ ವಿರೋಧಿಸುತ್ತಿದ್ದಾರೆ’- ಸಿಎಂ

ಬೆಂಗಳೂರು: BJP ಮತ್ತು JDS ನ ಬೆಂಬಲಿಗರು ಮತ್ತು ಮತದಾರರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಆದರೆ ಎರಡೂ ಪಕ್ಷದ ನಾಯಕರು ವಿರೋಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಬಿಜೆಪಿ, ಜೆಡಿಎಸ್ ನಾಯಕರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿರುವ ನಾಡಿನ ಜನತೆಯನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಸತ್ಯ ಶಾಶ್ವತ. ಹಳ್ಳಿ ಹಳ್ಳಿಗೆ ಗ್ಯಾರಂಟಿ ಯೋಜನೆ ಪರಿಣಾಮಕಾರಿಯಾಗಿ ತಲುಪುತ್ತಿದೆ. ಈ ಬಗ್ಗೆ ಸದನದಲ್ಲಿ ಬಹಳ ಹೆಮ್ಮೆಯಿಂದ ಮಾತನಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಶಾಸಕರು ಸದನದಲ್ಲಿ ಪರಿಣಾಮಕಾರಿಯಾಗಿ, ಕಡ್ಡಾಯವಾಗಿ ಭಾಗವಹಿಸುವ ಮೂಲಕ ಸದನದ ಸಮಯವನ್ನು ಅರ್ಥಪೂರ್ಣಗೊಳಿಸಿ. ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಸತ್ಯವನ್ನು ಹುದುಗಿಸಿಡಲು ಯತ್ನಿಸುತ್ತದೆ. ಏಕೆಂದರೆ ಲೋಕಸಭಾ ಚುನಾವಣೆಗೆ ಜನರ ಬಳಿಗೆ ಹೋಗಿ ಮುಖ ತೋರಿಸಲು ಬಿಜೆಪಿಗೆ ಅಭಿವೃದ್ಧಿ ವಿಚಾರಗಳೇ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯನ್ನು ಮರೆತು ಈಗ ಚುನಾವಣೆ ವೇಳೆ ಅಯೋಧ್ಯೆ ವಿಚಾರ ಒಂದನ್ನೇ ಮುಂದಿಟ್ಟುಕೊಂಡು ಹೊರಟಿದ್ದಾರೆ ಎಂದರು.
ಈ ಸತ್ಯ ನಾಡಿನ‌ ಜನತೆಗೆ ಮನವರಿಕೆಯಾಗಿದೆ. ಆದರೆ ಸದನದ ಕಡತಕ್ಕೆ ಹೋಗಲಿ ಎಂದು ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಾರೆ‌. ಇದಕ್ಕೆ ಸತ್ಯದ ಮೂಲಕ, ಅಧಿಕೃತ ಅಂಕಿ ಅಂಶಗಳ ಮೂಲಕ ಸ್ಪಷ್ಟ ಉತ್ತರ ಕೊಡಿ ಎಂದು ಶಾಸಕರಿಗೆ ಕರೆ ನೀಡಿದರು.

Advertisement

ಬಿಜೆಪಿ – ಜೆಡಿಎಸ್ ಗ್ಯಾರಂಟಿ ಯೋಜನೆಗಳ 5 ಕೋಟಿ ಫಲಾನುಭವಿಗಳನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ನಾವು ಈ ಜನರ ಪರವಾಗಿ ನಿಂತಿದ್ದೇವೆ. ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳು ಈ ಜನರ ಹಕ್ಕು. ಇದನ್ನು ನಾವು ಗಟ್ಟಿ ಧ್ವನಿಯಲ್ಲಿ ಹೇಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಸಭೆಗೆ ರಾಜ್ಯದಿಂದ ಅಭ್ಯರ್ಥಿಗಳಾಗಿರುವ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಮತ್ತು ಅಜಯ್ ಮಾಕನ್ ಅವರಿಗೆ ಅಭಿನಂದಿಸಲಾಯಿತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement