ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ನಾಲ್ವರಲ್ಲಿ ಕೆಎಫ್‌ಡಿ ಸೋಂಕು ಪತ್ತೆಯಾಗಿದ್ದು, ಮಲೆನಾಡಿಗರ ನಿದ್ದೆಗೆಡಿಸಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಮಲೆನಾಡು ಭಾಗದಲ್ಲಿ ಕಾಣಿಸುಕೊಳ್ಳುವ ಮಂಗನ ಖಾಯಿಲೆ ಈ ಬಾರಿ ಚಿಕ್ಕಮಗಳೂರಿನಲ್ಲಿಯೂ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಜಿಲ್ಲೆಯಲ್ಲಿ ಮತ್ತೆ ನಾಲ್ವರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ನರಸಿಂಹರಾಜಪುರ ತಾಲೂಕಿನ ಮೂವರು ಹಾಗೂ ಕೊಪ್ಪ ತಾಲೂಕಿನ ಒಬ್ಬರಲ್ಲಿ ಕೆ.ಎಫ್.ಡಿ ಸೋಂಕಿರುವುದು ಧೃಡಪಟ್ಟಿದೆ. ಎನ್.ಆರ್.ಪುರ ತಾಲೂಕಿನ ಕಾನೂರು, ಗುಬ್ಬಿಗಾ, 8ನೇ ಮೈಲಿಕಲ್ಲು ಗ್ರಾಮದಗಳಲ್ಲಿ ಸೋಂಕು ಪತ್ತೆಯಾಗಿದೆ. ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿರುವವರಲ್ಲಿ ಕೆ.ಎಫ್.ಡಿ ಕಾಣಿಸಿಕೊಂಡಿದೆ. ಬಿಸಿಲಿನ ಝಳ ಹೆಚ್ಚಾದಂತೆ ಇತ್ತ ಕೆ.ಎಫ್.ಡಿ. ಸೋಂಕಿತರ ಸಂಖ್ಯೆಯೂ ಕೂಡಾ ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 23 ಸಕ್ರಿಯ ಪ್ರಕರಣಗಳು ಕಂಡುಬಂದಿದ್ದು, ಮಲೆನಾಡಲ್ಲಿ ದಿನದಿಂದ ದಿನಕ್ಕೆ ಕೆ.ಎಫ್.ಡಿ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆರೋಗ್ಯ ಇಲಾಖೆ ಮಲೆನಾಡಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದು ಕಟ್ಟೆಚ್ಚರ ವಹಿಸಿದೆ.