ಪಪುವಾ ನ್ಯೂಗಿನಿ: ಪಪುವಾ ನ್ಯೂಗಿನಿಯಾದ ಉತ್ತರದ ಎತ್ತರದ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದವರ ಕಾಳಗದಲ್ಲಿ ಕನಿಷ್ಠ 53 ಜನರ ಹತ್ಯೆಯಾಗಿದೆ ಎಂದು ವರದಿಯಾಗಿದೆ.
ರಾಜಧಾನಿ ಪೋರ್ಟ್ಮೊರೆಸ್ಬಿಯ ವಾಯುವ್ಯಕ್ಕೆ 600 ಕಿ. ಮೀ. ದೂರದಲ್ಲಿರುವ ವಾಬಾಗ್ ಪಟ್ಟಣದ ಬಳಿ ಈ ಘಟನೆ ಸಂಭವಿಸಿದೆ. ಇದು ಸಿಕಿನ್, ಅಂಬ್ಯುಲಿನ್ ಮತ್ತು ಕೇಕಿನ್ ಬುಡಕಟ್ಟು ಜನಾಂಗದವರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದೆ. ಕಳೆದ ವರ್ಷ ಎಂಗಾ ಪ್ರಾಂತ್ಯದಲ್ಲಿ 60 ಮಂದಿಯನ್ನು ಕೊಂದ ಘರ್ಷಣೆಗಳಿಗೆ ಕಾರಣವಾದ ಅದೇ ಬುಡಕಟ್ಟು ಜನಾಂಗದವರು ಈ ಹಿಂಸಾಚಾರದಲ್ಲೂ ಭಾಗಿಯಾಗಿದ್ದಾರೆ ಎಂದು ಎಬಿಸಿ ಹೇಳಿದೆ.
ಬುಡಕಟ್ಟು ಜನಾಂಗದ ನಡುವೆ ಭಾನುವಾರ ಮುಂಜಾನೆ ಹೊಂಚು ದಾಳಿ ನಡೆದಿತ್ತು. ಇದಾದ ಬೆನ್ನಲ್ಲೇ ಶವಗಳು ಪತ್ತೆಯಾಗಿವೆ. ಪಪುವಾ ನ್ಯೂಗಿನಿಯಾದ ಹೈಲ್ಯಾಂಡ್ಸ್ ನಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದ ನಡುವೆ ಶತಮಾನಗಳಿಂದ ಸಂಘರ್ಷ ನಡೆಯುತ್ತಿದೆ. ಆದರೆ ಶಸ್ತ್ರಾಸ್ತ್ರಗಳ ಒಳಹರಿವು ಘರ್ಷಣೆಯನ್ನು ಹಿಂಸಾಚಾರಕ್ಕೆ ದೂಡಿದೆ.