ಇಂದಿನಿಂದ ಫೆ.20ರಿಂದ ವಿ.ವಿ.ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು

 

ಚಿತ್ರದುರ್ಗ: ವಾಣಿ ವಿಲಾಸ ಸಾಗರ ಜಲಾಶಯದ ಮೇಲ್ಮಟ್ಟ, ಬಲನಾಲ, ಎಡನಾಲ ಅಚ್ಚುಕಟ್ಟು ಪ್ರದೇಶದ ಗ್ರಾಮಗಳ ಸುಮಾರು 12 ಸಾವಿರ ಹೆಕ್ಟೇರ್ ಕೃಷಿಭೂಮಿಗೆ 2023-24ನೇ ಸಾಲಿನ ಬೇಸಿಗೆ ಹಂಗಾಮಿಗೆ, ಫೆ.20 ರಿಂದ ಒಂದು ತಿಂಗಳ ಕಾಲ ನೀರು ಹರಿಸಲು ಜಿಲ್ಲಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಈ ಕುರಿತು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉಪಸ್ಥಿತಿಯಲ್ಲಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಜರುಗಿತು.

Advertisement

ಜಿಲ್ಲಾ ನೀರಾವರಿ ಸಲಹಾ ಸಮಿತಿ ಅಧಿಕಾರೇತರ ಸದಸ್ಯರು, ಈ ಬಾರಿ ಭೀಕರ ಬರಗಾಲ ಎದುರಾಗಿದೆ. ವಿ.ವಿ.ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ತೋಟಗಳು ಹಾಗ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಬೊರ್‍ವೆಲ್‍ಗಳು ಬತ್ತಿ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದೆ. ತಕ್ಷಣವೇ ವಿ.ವಿ.ಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹದಲ್ಲಿ ಬೇಸಿಗೆ ಹಂಗಾಮಿಗೆ ಕನಿಷ್ಠ 40 ದಿನಗಳ ಕಾಲ ನಾಲೆಗಳ ಮೂಲಕ ನೀರು ಹರಿಸುವಂತೆ ಸಭೆಯಲ್ಲಿ ಬೇಡಿಕೆಯನ್ನಿಟ್ಟರು.

ಅಚ್ಚುಕಟ್ಟು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆಗಳ ಜೊತೆಗೆ ರೈತರು ಕೃಷಿ ಬೆಳೆಗಳಾದ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ, ರಾಗಿ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಸದರಿ ಬೆಳೆಗಳು ಬೆಳವಣಿಗೆ ಹಂತದಲ್ಲಿ ಇದ್ದು, ಸೂರ್ಯನ ತಾಪಮಾನಕ್ಕೆ ಸಿಲುಕಿ ಬೆಳೆಗೆ ಹಾನಿಯಾಗಿ ನಷ್ಟ ಸಂಭವಿಸಬಹುದು. ಆದ್ದರಿಂದ ಕೂಡಲೇ ವಿ.ವಿ.ಸಾಗರ ಜಲಾಶಯದಿಂದ ನೀರು ಹರಿಸುವಂತೆ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

ಜಲಾಶಯದ ಸಂಗ್ರಹಣಾ ಸಾಮಥ್ರ್ಯ 30.42 ಟಿ.ಎಂ.ಸಿ ಗಳಾಗಿದೆ. ಇದರಲ್ಲಿ 1.87 ಟಿ.ಎಂ.ಸಿ ನೀರು ಬಳಕೆಗೆ ಬರುವುದಿಲ್ಲ. 28.55 ಟಿ.ಎಂ.ಸಿ ನೀರು ಮಾತ್ರ ಬಳಸಬಹುದು. ಪ್ರಸ್ತುತ ಜಲಾಶಯದಲ್ಲಿ ನೀರಿನ ಮಟ್ಟ 117.50 ಅಡಿ ಎತ್ತರವಿದೆ. 18.59 ಟಿ.ಎಂ.ಸಿ ನೀರಿನ ಸಂಗ್ರಹಣೆಯಿದೆ. ಹಿರಿಯೂರು, ಚಿತ್ರದುರ್ಗ ನಗರದ ಪ್ರದೇಶಗಳು, ಚಳ್ಳಕೆರೆ ಪಟ್ಟಣ ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿರುವ ವಿವಿಧ ಸಂಶೋಧನಾ ಕೇಂದ್ರಗಳು ಹಾಗೂ 18 ಹಳ್ಳಿಗಳಿಗೆ  ನಿತ್ಯ 40 ಎಂ.ಎಲ್.ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಬೇಸಿಗೆ ಬೆಳೆಗಳಿಗೆ 30 ದಿನಗಳ ಕಾಲ ನೀರು ಹರಿಸಿದರೆ 1.40 ಟಿ.ಎಂ.ಸಿ ನೀರು ಬೇಕಾಗುತ್ತದೆ. ಸೂರ್ಯನ ಶಾಖಕ್ಕೆ ಬೇಸಿಗೆ ಅಂತ್ಯದ ವೇಳೆಗೆ 0.354 ಟಿ.ಎಂ.ಸಿ ನೀರು ಆವಿಯಾಗುವ ಸಂಭವಿದೆ. ಒಟ್ಟು 1.965 ಟಿ.ಎಂ.ಸಿ ನೀರಿನ ಬಳಕೆಯ ನಂತರ, ಜಲಾಶಯದಲ್ಲಿ 16.625 ಟಿ.ಎಂ.ಸಿ ನೀರು ಉಳಿಯಲಿದ್ದು, ನೀರನ ಮಟ್ಟ 114.40 ಅಡಿಗೆ ತಲುಪಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಹಿರಿಯರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಾರಿಕೇರ ಚಂದ್ರಪ್ಪ ಸಭೆಯಲ್ಲಿ ಮಾಹಿತಿ ನೀಡಿದರು.

ಇದನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಫೆ.20 ರಿಂದ ಅಚ್ಚಕಟ್ಟು ಪ್ರದೇಶದಲ್ಲಿ, 30 ದಿನಗಳು ಬೇಸಿಗೆ ಬೆಳೆ ನೀರು ಹರಿಸುವಂತೆ ಸೂಚನೆ ನೀಡಿದರು. ಇದರ ಜೊತೆಯಲ್ಲಿ ಈಗಾಗಲೇ ಬರಗಾಲಕ್ಕೆ ತುತ್ತಾದ ಹಿರಿಯೂರು ತಾಲ್ಲೂಕಿನ 42 ಹಳ್ಳಿಗಳಲ್ಲಿ ಜಲಾಶಯದ ನೀರು ಹರಿಸುವುದರಿಂದ ಅಂತರ್ಜಲ ಅಭಿವೃದ್ಧಿಯಾಗಲಿದೆ. ಜಮೀನುಗಳಿಗೆ ರೈತರು ನೀರು ಹಾಯಿಸುವುದರಿಂದ ಜಾನುವಾರುಗಳಿಗೂ ಕುಡಿಯುವ ನೀರು ದೊರಕಲಿದೆ ಎಂದರು.

ಸಭೆಯಲ್ಲಿ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ, ಸಿಇಓ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ವಿಶ್ವೇಶ್ವರಯ್ಯ ಜಲ ನಿಗಮದ ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್  ಶಿವಪ್ರಕಾಶ್.ಕೆ.ಎಂ, ಸಲಹಾ ಸಮಿತಿ ಸದಸ್ಯರುಗಳಾದ ಸಿ.ಎನ್.ಸುಂದರಂ, ಪಿ.ಕೆ.ಸುಂದರೇಶ್, ವೈ.ನಾಗರಾಜು, ಆಸಿಫ್ ಅಲಿ, ಎನ್.ಅನಿಲ್‍ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement