ನವದೆಹಲಿ: ದೆಹಲಿ ಸರ್ಕಾರ ಹಣಕಾಸು ಸಚಿವೆ ಆತಿಶಿ ಅವರು ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. 76,000 ಕೋಟಿ ರೂ ಗಾತ್ರದ ಬಜೆಟ್ನಲ್ಲಿ ಶೇ. 21ಕ್ಕೂ ಹೆಚ್ಚು ಹಣವನ್ನು ಶಿಕ್ಷಣಕ್ಕೆ ನೀಡಲಾಗಿದೆ.ಇನ್ನು ಬಜೆಟ್ನಲ್ಲಿ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯನ್ನು ಘೋಷಿಸಲಾಗಿದೆ.
ಈ ಯೋಜನೆಯಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲಾ ಮಹಿಳೆಯರಿಗೂ ತಿಂಗಳಿಗೆ 1,000 ರೂ ನೀಡಲಾಗುತ್ತದೆ. ಏಪ್ರಿಲ್ 1ರಿಂದ ಇದು ಜಾರಿಯಾಗಲಿದೆ. ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಈ ಕೊಡುಗೆ ಸಿಗುತ್ತದೆ ಎಂದು ಆತಿಶಿ ತಮ್ಮ ಬಜೆಟ್ನಲ್ಲಿ ತಿಳಿಸಿದ್ದಾರೆ.
ಹಣಕಾಸು ಸಚಿವೆ ಆತಿಶಿ ತಮ್ಮ 76,000 ಕೋಟಿ ರೂ ದಾಖಲೆಯ ಬಜೆಟ್ನಲ್ಲಿ 16,396 ಕೋಟಿ ರೂ.ವನ್ನು ಶಿಕ್ಷಣ ವಲಯಕ್ಕೆ ಕೊಟ್ಟಿದ್ದಾರೆ. 8,685 ಕೋಟಿ ರೂ ಅನ್ನು ಆರೋಗ್ಯ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಕೇಜ್ರಿವಾಲ್ ಸರ್ಕಾರದ ಟ್ರೇಡ್ಮಾರ್ಕ್ ಎನಿಸಿರುವ ಮೊಹಲ್ಲಾ ಕ್ಲಿನಿಕ್ಗಳಿಗೆ 212 ಕೋಟಿ ರೂ ಕೊಡಲಾಗಿದೆ.
ಮಹಿಳೆಯರಿಗೆ ಮಾಸಿಕ 1,000 ರೂ ನೀಡುವುದು ಈ ಬಾರಿಯ ಬಜೆಟ್ನ ಮುಖ್ಯ ಅಂಶವಾಗಿದೆ. ಹಾಗೆಯೇ, ವಿದ್ಯುತ್ ಬಿಲ್ ಸಬ್ಸಿಡಿ ಮುಂದುವರಿಯುತ್ತಿದೆ ಎಂದು ಹೇಳಿದರು.