ಬೆಂಗಳೂರು: ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ ಸಂಬಂಧ ಬಂಧಿತನಾಗಿರುವ ಮುಜಾಮಿಲ್ ಪಾಷಾನನ್ನ ಏಳು ದಿನಗಳ ಕಾಲ ವಶಕ್ಕೆ ಪಡೆದು ತನಿಖೆಯನ್ನ ಎನ್ಐಎ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಶಂಕಿತ ಉಗ್ರನನ್ನ ನಗರದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೆಫೆ ಸ್ಫೋಟ ಸಂಬಂಧ ಪ್ರಮುಖ ಆರೋಪಿಗಳಿಗೆ ಬಾಂಬ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನ ಸಾಗಿಸಿದ್ದರ ಜೊತೆಗೆ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಮಾಹಿತಿ ಲಭ್ಯವಾಗಿದೆ ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಮಾಡಿದ ಮನವಿಗೆ ಪುರಸ್ಕರಿಸಿ ಏಳು ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಲು ಆದೇಶಿಸಿತು.
ಬಾಂಬ್ ಸ್ಫೋಟದ ಆರೋಪಿಗೆ ಬೇಕಾದ ಕಚ್ಚಾವಸ್ತು ಸೇರಿದಂತೆ ಬೇಕಾದ ಮೂಲಸೌಕರ್ಯ ಒದಗಿಸಿದ ಆರೋಪದ ಮೇರೆಗೆ ಚಿಕ್ಕಮಗಳೂರಿನ ಮೂಡಗೆರೆ ಮೂಲದ ಮುಜಾಮಿಲ್ ಷರೀಫ್ ನಿನ್ನೆ ಬಂಧಿಸಲಾಗಿತ್ತು. ಕಳೆದ ಆರು ತಿಂಗಳ ಹಿಂದೆ ಬೆಂಗಳೂರು ತೊರೆದು ಮೂಡಗೆರೆಯ ಚಿಕನ್ ಕೌಂಟಿವೊಂದರಲ್ಲಿ ಕೆಲಸ ಮಾಡುತ್ತಿದ್ದ. ತೀರ್ಥಹಳ್ಳಿಯ ಮೋಸ್ಟ್ ವಾಂಟೆಡ್ ಶಂಕಿತ ಉಗ್ರನಾಗಿರುವ ಅಬ್ದುಲ್ ಮತೀನ್ ತಾಹಾ ಎಸ್ಸೆಸ್ಸಿಲಿಯವರೆಗೂ ಕ್ಲಾಸ್ ಮೇಟ್ ಆಗಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.