ಬೆಂಗಳೂರು: ಭದ್ರತೆ ವೈಫಲ್ಯ ಯಾವುದೂ ಆಗಿಲ್ಲ. ಅವರವರ ರಕ್ಷಣೆಗೆ ಗನ್ ಇಟ್ಟುಕೊಂಡಿರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಗನ್ ಹಿಡಿದು ಸಿಎಂ ಗೆ ಹಾರ ಹಾಕಿದ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನ್ನ ಜೊತೆಗೂ ಗನ್ ಮ್ಯಾನ್ ಗಳು ಇದ್ದಾರೆ. ವಿರೋಧ ಪಕ್ಷಗಳಿಗೆ ಮಾತಾಡೋಕೆ ಒಳ್ಳೆಯ ವಿಷಯ ಇದ್ರೆ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಭೈರಸಂದ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ರಿಯಾಜ್ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಹಾರ ಹಾಕಿ ಅಲ್ಲಿಂದ ತೆರಳಿದ್ದಾರೆ. ರಿಯಾಜ್ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ. ಆದರೆ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಭಾರೀ ಸುದ್ದಿಯಾಯಿತು.
ಇದಾದ ಬಳಿಕ ರಿಯಾಜ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರ ಮುಂದೆ ರಿಯಾಜ್, ನಂಗೆ ಲೈಫ್ ಥ್ರೆಟ್ ಇದೆ. ಹೀಗಾಗಿ ಪ್ರತೀ ದಿನ ಗನ್ ಇಟ್ಟುಕೊಂಡೇ ಹೊರಗೆ ಬರುತ್ತೇನೆ. ಹೊರತು ಸಿಎಂ ಮುಂದೆ ಗನ್ ಪ್ರದರ್ಶನ ಮಾಡಬೇಕು ಅನ್ನೊ ಉದ್ದೇಶ ನನಗಿರಲಿಲ್ಲ ಎಂದು ಹೇಳಿರುವುದು ತಿಳಿದುಬಂದಿದೆ.