ಸಾಮಾನ್ಯವಾಗಿ ಮಜ್ಜಿಗೆಯಿಂದ ತಯಾರಿಸಿದ ಅಡುಗೆ ಎಲ್ಲರಿಗೂ ಹೆಚ್ಚು ಇಷ್ಟವಾಗುತ್ತದೆ. ಹಸಿದಾಗಲೂ ಮೊದಲು ನೆನಪಾಗುವುದು ಮಜ್ಜಿಗೆ. ಹೊಲದಲ್ಲಿ ದುಡಿದು ದಣಿದು ಮನೆಗೆ ಬಂದಾಗ ತಂಪಾದ ಮಜ್ಜಿಗೆ ಕುಡಿದು ವಿಶ್ರಾಂತಿ ಪಡೆದರೆ ದೇಹದ ದಣಿವೆಲ್ಲಾ ಮಾಯವಾಗುತ್ತೆ. ಇನ್ನು ಕೆಲವರು ಮಸಾಲಾ ಮಜ್ಜಿಗೆ ಮಾಡಿಯೂ ಸವಿಯುತ್ತಾರೆ.
ಈ ಮಜ್ಜಿಗೆ ರುಚಿಯೂ ಹೌದು ಜೊತೆಗೆ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ಹಾಗಿರುವಾಗ ಮಜ್ಜಿಗೆ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ..? ಕುತೂಹಲಕರ ಸಂಗತಿಗಳು ಈ ಕೆಳಗಿನಂತಿದೆ. ಬೆಣ್ಣೆ ತೆಗೆದ ಮಜ್ಜಿಗೆಯಲ್ಲಿ ಆರೋಗ್ಯಕರ ಕಾರ್ಬೋಹೈಡ್ರೆಟ್ ಮತ್ತು ಲ್ಯಾಕ್ಟೋಸ್ ಇರುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ನಿಯಮಿತವಾದ ಆಹಾರದೊಂದಿಗೆ ಮಜ್ಜಿಗೆ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ. ಇದಾಗ್ಯೂ ತೂಕ ಇಳಿಸಿಕೊಳ್ಳಲು ಮಜ್ಜಿಗೆ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಮಜ್ಜಿಗೆ ಆರೋಗ್ಯಕರ ಬ್ಯಾಕ್ಟಿರಿಯಾಗಳನ್ನು ಹೊಂದಿರುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಈ ಆರೋಗ್ಯಕರ ಬ್ಯಾಕ್ಟಿರಿಯಾಗಳು ಸಹಾಯ ಮಾಡುತ್ತವೆ.
ಆದ್ದರಿಂದ ಇದು ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಉತ್ತಮ ಬ್ಯಾಕ್ಟಿರಿಯಾವು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯನ್ನು ತಡೆಯುತ್ತದೆ. ಜೊತೆಗೆ ಮಜ್ಜಿಗೆಯಲ್ಲಿ ವಿಟಮಿನ್ ಡಿ ಅಂಶವಿದ್ದು, ಇದು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ಮಜ್ಜಿಗೆ ಸೇವನೆಯು ಮಹಿಳೆಯರಿಗೆ ಒಳ್ಳೆಯದು.