ಉತ್ತರ ಪ್ರದೇಶ : ಕೇರಳದ ವಯನಾಡು ಕ್ಷೇತ್ರದ ಜೊತೆಗೆ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಈ ಬಾರಿ ಕೂಡ ಸ್ಪರ್ಧಿಸುತ್ತಿರುವುದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.
ಅಮೇಠಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಇನ್ನೂ ಘೋಷಿಸದಿರುವ ಹಿನ್ನೆಲೆಯಲ್ಲಿ , ಸ್ಪಷ್ಟನೆ ನೀಡಿದ ಅವರು ತಾವು ಅಮೇಥಿ ಕ್ಷೇತ್ರದಿಂದಲೂ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅಮೇಥಿಯಲ್ಲಿ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ವದಂತಿಗಳು ಕೇಳಿಬಂದಿತ್ತು. ಆದರೆ ಸ್ಪರ್ಧಿಸಲು ನಾನು ಸಿದ್ದ, ಪಕ್ಷದ ಕೇಂದ್ರ ಚುನಾವಣಾ ಸಮಿತಿಯ (ಸಿಇಸಿ) ಏನು ಹೇಳುತ್ತದೆಯೋ ಅದರ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದಾರೆ.
ಗಾಂಧಿ ಮನೆತನದ ಭದ್ರಕೋಟೆಗಳು ಎಂದು ಪರಿಗಣಿಸಲ್ಪಟ್ಟಿದ್ದ ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರದಿಂದ ವರ್ಷಗಳ ಕಾಲ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸಂಸದರಾಗಿದ್ದರು. ಸೋನಿಯಾ ಗಾಂಧಿಯವರು ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ರಾಯ್ ಬರೇಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ರಾಹುಲ್ ಗಾಂಧಿ 2004 ರಿಂದ ಸತತ ಮೂರು ಬಾರಿ ಅಮೇಥಿ ಕ್ಷೇತ್ರವನ್ನು ಗೆದ್ದಿದ್ದಾರೆ. ಆದರೆ, 2019 ರಲ್ಲಿ ಸ್ಮೃತಿ ಇರಾನಿಯವರು 55,000 ಮತಗಳಿಂದ ಗೆದ್ದು ಬೀಗಿದ್ದರು.ಆದರೆ ಅಮೇಥಿ ಕ್ಷೇತ್ರವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ಸೋನಿಯಾ ಗಾಂಧಿ ಕುಟುಂಬಕ್ಕೆ ಮನಸ್ಸಿದ್ದಂತೆ ಕಾಣುತ್ತಿಲ್ಲ.
ಇಂದು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಇಂಡಿಯಾ ಮೈತ್ರಿ ಒಕ್ಕೂಟದ ನಾಯಕ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೀಟುಗಳ ಭವಿಷ್ಯ ಬಗ್ಗೆ ಹೇಳುವುದಿಲ್ಲ. 15-20 ದಿನಗಳ ಹಿಂದೆ ಬಿಜೆಪಿ ಸುಮಾರು 180 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಾನು ಭಾವಿಸಿದ್ದೆ ಆದರೆ ನಾವು ಸುಧಾರಿಸುತ್ತಿದ್ದೇವೆ ಎಂದು ಪ್ರತಿ ರಾಜ್ಯದಿಂದ ನಮಗೆ ವರದಿಗಳು ಬರುತ್ತಿವೆ. ಉತ್ತರ ಪ್ರದೇಶದಲ್ಲಿ ನಮಗೆ ಬಲವಾದ ಮೈತ್ರಿ ಇದೆ. ಈಗ ಬಿಜೆಪಿ 150 ಸ್ಥಾನಗಳಿಗಿಂತ ಕಡಿಮೆ ಸ್ಥಾನ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ