ಹಿರಿಯೂರು: ಬಿ.ಎಸ್.ಯಡಿಯೂರಪ್ಪ ಮತ್ತು ಮಕ್ಕಳು ಕಾರ್ಯಕರ್ತರ ಪಕ್ಷ ಬಿಜೆಪಿಯನ್ನು ನಾಶಗೊಳಿಸಲು ಮುಂದಾಗಿದ್ದಾರೆ ಎಂದು ಹಿಂದುಳಿದ ದಲಿತ (ಹಿಂದ) ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಮುಕುಡಪ್ಪ ದೂರಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕೆಂಬುದು ನಮ್ಮ ಆಸೆ. ಆದರೆ, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮೂಲೆಗುಂಪು ಮಾಡಲು ಅಪ್ಪ-ಮಕ್ಕಳು ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ಬಿಜೆಪಿ ಕಟ್ಟಿದವರಲ್ಲಿ ಅನಂತಕುಮಾರ್, ಕೆ.ಎಸ್.ಈಶ್ವರಪ್ಪ, ಬಿ.ಬಿ.ಶಿವಪ್ಪ ಬಿ.ಎಸ್.ಯಡಿಯೂರಪ್ಪ ಪ್ರಮುಖರು. ಆದರೆ, ಯಡಿಯೂರಪ್ಪ ಮಾತ್ರ ತನ್ನ ಧೃತರಾಷ್ಟ್ರ ಪ್ರೇಮಕ್ಕೆ ಇಡೀ ಪಕ್ಷವನ್ನೇ ಕುಟುಂಬಕ್ಕೆ ಅಡಮಾನ ಇಟ್ಟಿದ್ದಾರೆ ಎಂದು ಹೇಳಿದರು.
ಮೂರು ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದ ಈಶ್ವರಪ್ಪ ಅವರಿಗೆ ಹಾಗೂ ಜಗದೀಶ್ ಶೆಟ್ಟರ್ ಸೇರಿ ಅನೇಕರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಲಿಲ್ಲ. ಚಿಕ್ಕಮಗಳೂರಲ್ಲಿ ಪಿತೂರಿ ನಡೆಸಿ ಸಿ.ಟಿ.ರವಿ ಅವರನ್ನು ಸೋಲಿಸಲಾಯಿತು. ಕಾರಣ ತನ್ನ ಮಗ ವಿಜಯೇಂದ್ರನ ಬೆಳವಣಿಗೆಗೆ ಯಾರೋಬ್ಬರು ಪ್ರತಿಸ್ಪರ್ಧಿ ಇರಬಾರದು ಎಂಬ ಸಂಕುಚಿತ ಮನೋಭಾವ ಎಂದರು.
ವೀರಶೈವ ಲಿಂಗಾಯತರ ಬೆಂಬಲ ಇಲ್ಲದಿದ್ದರೂ ನಾನೇ ಆ ಸಮುದಾಯದ ಬಹುದೊಡ್ಡ ನಾಯಕ ಎಂದು ಭಟ್ಟಂಗಿಗಳಿಂದ ಬಿಂಬಿಸಿಕೊಳ್ಳುತ್ತಿದ್ದಾರೆ. ಅಷ್ಟೋಂದು ಶಕ್ತಿ ಇದ್ದಿದ್ದರೇ ಕೆಜೆಪಿ ಪಕ್ಷ ಕಟ್ಟಿ ವಿಧಾನಸಭಾ ಚುನಾವಣೆಯಲ್ಲಿ ಆರು ಸ್ಥಾನ ಗೆದ್ದಿದ್ದು ಏಕೆ. ಅದೇ ಈಡಿಗ ಸಮುದಾಯದ ಬಂಗಾರಪ್ಪ ಕೆಸಿಪಿ ಪಕ್ಷ ಕಟ್ಟಿ ಹದಿನಾಲ್ಕು ಸೀಟು ಗೆದ್ದಿದ್ದರು. ಅಂದರೇ ಯಡಿಯೂರಪ್ಪ ಅವರನ್ನು ಅವರದ್ದೇ ಸಮುದಾಯದ ಲಿಂಗಾಯಿತರು ಬೆಂಬಲಿಸಲಿಲ್ಲ ಎಂಬುದು ಸ್ಪಷ್ಟ ಎಂದರು.
ಆದರೂ ಹೈಕಮಾಂಡ್ ಬಳಿ ಸುಳ್ಳು ಹೇಳಿ ಹಿರಿಯರನ್ನು ಕಡೆಗಣಿಸಿ ಮಗ ವಿಜಯೇಂದ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದಾರೆ. ಜೊತೆಗೆ ಮತ್ತೊಬ್ಬ ಮಗ ರಾಘವೇಂದ್ರ ಹಾಗೂ ತನ್ನ ಆತ್ಮೀಯಳಾಗಿರುವ ಶೋಭಾ ಕರಂದ್ಲಾಜೆಗೆ ಎಂಪಿ ಟಿಕೆಟ್ ಕೊಡಿಸಿದ್ದಾರೆ. ಆದರೆ, ಮಾಜಿ ಸಿಎಂ ಸದಾನಂದಗೌಡ, ಕೆ.ಎಸ್.ಈಶ್ವರಪ್ಪ, ಯುವ ನಾಯಕ ಕಾಂತೇಶ್, ಕರಡಿ ಸಂಗಣ್ಣ ಹೀಗೆ ಅನೇಕ ನಾಯಕರಿಗೆ ಟಿಕೆಟ್ ತಪ್ಪಿಸಿ ಮೂಲೆಗುಂಪು ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.
ಜೊತೆಗೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಸಂಖ್ಯೆಯಲ್ಲಿರುವ ಕುರುಬ ಸಮುದಾಯದವರಿಗೆ ಒಂದು ಟಿಕೆಟ್ ನೀಡಿಲ್ಲ. ಇದು ಕುರುಬ ಸಮುದಾಯಕ್ಕೆ ಮಾಡಿರುವ ಅನ್ಯಾಯ ಎಂದರು.
ಅಪ್ಪ-ಮಕ್ಕಳಿಂದ ಬಿಜೆಪಿ ನಾಶ ಆಗುವ ಹಂತಕ್ಕೆ ಬಂದಿದ್ದು ಹಾಗೂ ಕುರುಬ ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿ *ಅಪ್ಪ-ಮಕ್ಕಳು ಹಠಾವ್ ಬಿಜೆಪಿ ಬಚಾವ್* ಆಂದೋಲನ ರಾಜ್ಯಾದ್ಯಂತ ಹಿಂದ ಒಕ್ಕೂಟದಿಂದ ನಡೆಸಲಾಗುತ್ತಿದೆ. ಎಲ್ಲೆಡೆಯೂ ಬಿಜೆಪಿ ಮುಖಂಡರು, ಕಾರ್ಯಕರ್ತರೇ ಹೆಚ್ಚು ಬೆಂಬಲ ತೋರುತ್ತಿದ್ದಾರೆ ಎಂದಯ ಹೇಳಿದರು.
ದೇಶದಲ್ಲಿ ನರೇಂದ್ರ ಮೋದಿ ಉತ್ತಮ ಆಡಳಿತ ನಡೆಸುತ್ತಿದ್ದು, ರಾಜ್ಯದಲ್ಲಿ ಅಪ್ಪ-ಮಕ್ಕಳ ಕಪಿಮುಷ್ಠಿಯಿಂದ ಬಿಜೆಪಿಯನ್ನು ವಾಪಸ್ಸು ಪಡೆದು ಕಾರ್ಯಕರ್ತರ ಮಡಿಲಿಗೆ ಹಾಕಬೇಕಿದೆ. ಸಿ.ಟಿ.ರವಿ, ಬಸವನಗೌಡ ಪಾಟೀಲ್ ಯತ್ನಾಳ್ ಅಂತಹ ಪಕ್ಷ ನಿಷ್ಠರು ಬಿಜೆಪಿ ಮುನ್ನಡೆಸಬೇಕಿದೆ. ಕುರುಬ ಸಮುದಾಯದ ನಾಯಕ, ಬಿಜೆಪಿ ನಿಷ್ಠಾವಂತ ಕೆ.ಎಸ್.ಈಶ್ವರಪ್ಪ ಅವರಿಗೆ ಆಗಿರುವ ಅನ್ಯಾಯಕ್ಕೆ ತಕ್ಕಪಾಠ ಕಲಿಸಲು ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಬೇಕಿದೆ. ಶಿವಮೊಗ್ಗದಲ್ಲಿ ರಾಘವೇಂದ್ರ ಸೊತು, ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಿದರೇ ಮಾತ್ರ ಬಿಜೆಪಿ ರಾಜ್ಯದಲ್ಲಿ ಉಳಿಯಲಿದೆ ಎಂದರು.
ಶಿಕಾರಿಪುರದಲ್ಲಿ ವಿಜಯೇಂದ್ರನನ್ನು ಗೆಲ್ಲಿಸಿಕೊಳ್ಳಲು ಸಿದ್ದರಾಮಯ್ಯ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ಸಿನಿಂದ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡಿದ್ದು ರಾಜ್ಯದ ಜನರಿಗೆ ಗೊತ್ತಿದೆ. ಅಷ್ಟಾದರೂ ಕೇವಲ ಐದು ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದು ಯಡಿಯೂರಪ್ಪ ಜನರ ನಾಯಕನಲ್ಲ, ಕುಟುಂಬದ ನಾಯಕ ಎಂಬುದನ್ನು ದೃಢಪಡಿಸಿದೆ ಎಂದರು.
ಯಡಿಯೂರಪ್ಪ ಜೈಲಿಗೆ ಹೋಗಲು ವಿಜಯೇಂದ್ರನ ಭ್ರಷ್ಟಾಚಾರ ಕಾರಣ ಎಂಬುದು ಜಗತ್ತಿಗೆ ಗೊತ್ತು. ಅಪ್ಪನನ್ನೇ ಜೈಲಿಗೆ ಕಳಿಸಿದ ವಿಜಯೇಂದ್ರ, ಪಕ್ಷವನ್ನು ರಾಜ್ಯದಲ್ಲಿ ಹೇಳಹೆಸರು ಇಲ್ಲದಂತೆ ಮಾಡಲು ಹೊರಟಿದ್ದಾರೆ. ಆದ್ದರಿಂದ ಬಿಜೆಪಿ ವರಿಷ್ಠರು ಎಚ್ಚೇತ್ತುಕೊಳ್ಳಬೇಕು. ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಬೇಕು. ರಾಘವೇಂದ್ರನನ್ನು ಕೈಬಿಡಬೇಕು. ಒಂದೇ ಮನೆಯಲ್ಲಿ ಅಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ, ಹಲವು ಬಾರಿ ರಾಜ್ಯಾಧ್ಕಕ್ಷ ಸ್ಥಾನ, ವಿಪಕ್ಷ ಸ್ಥಾನ ಅಲಕರಿಸಿದ್ದು, ಒಬ್ಬ ಮಗ ಮೂರು ಬಾರಿ ಎಂಪಿ, ಮತ್ತೊಬ್ಬ ಮಗ ಶಾಸಕ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ. ಹಾಗಾದರೇ ಪಕ್ಷ ಕಟ್ಡಿದ ಕಾರ್ಯಕರ್ತರು, ನಾಯಕರು ಏನಾಗಬೇಕು. ಲಿಂಗಾಯತರೇ ಒಪ್ಪಿಕೊಳ್ಳದ ಯಡಿಯೂರಪ್ಪ ಮತ್ತು ಮಕ್ಕಳಿಗೆ ಏಕೆ ಇಷ್ಟು ಮಾನ್ಯತೇ ಎಂದು ಮುಕುಡಪ್ಪ ಪ್ರಶ್ನಿಸಿದರು.
ಒಮ್ಮೆಯೂ ಬಿಜೆಪಿ ಪಕ್ಷಕ್ಕೆ ಬಹುಮತ ತಂದುಕೊಡಲು ಶಕ್ತಿ ಇಲ್ಲದ ಯಡಿಯೂರಪ್ಪ, ಭ್ರಷ್ಟಚಾರ ಮೂಲಕ ಗಳಿಸಿದ ಹಣದಿಂದ ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿ ಆಗಿದ್ದೇ ಯಡಿಯೂರಪ್ಪ ಸಾಧನೆ ಎಂದು ವ್ಯಂಗ್ಯವಾಡಿದರು.
ಇಂತಹ ಭ್ರಷ್ಟರು, ತನ್ನ ಮಕ್ಕಳಿಗಾಗಿ ವೀರಶೈವ ಲಿಂಗಾಯತ ನಾಯಕರನ್ನೇ ಮೂಲೆಗುಂಪು ಮಾಡುತ್ತಿರುವ, ಕುರುಬ ಸಮುದಾಯದ ವಿರುದ್ಧ ಷಡ್ಯಂತ್ರ ರೂಪಿಸಿರುವ ಯಡಿಯೂರಪ್ಪ ಮಗನ ಸೋಲು ನಮ್ಮ ಗುರಿ ಆಗಿದೆ ಎಂದರು.
ಪ್ರಧಾನಕಾರ್ಯದರ್ಶಿ ಶಾಂತಕುಮಾರ್ ಪಗಡಲಬಂಡೆ, ಮುಖಂಡರಾದ ಪ್ರದೀಪ್, ಪರಮೇಶ್, ಕೇಶವ ಇತರರು ಇದ್ದರು.