ಮಾಲೆ: ಮಾಲ್ಡೀವ್ಸ್‌ನಲ್ಲಿ ಭಾನುವಾರ ಸಂಸದೀಯ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್ ಸಿ) 60ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಗೆಲುವು ಸಾಧಿಸಿದೆ.
ಮಾಲ್ಡೀವ್ಸ್‌ನ ಒಟ್ಟು 93 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಇದೀಗ ಈ ಚುನಾವಣೆಯಲ್ಲಿ ಭಾರತ ವಿರೋಧಿ ಮುಯಿಝುಗೆ ಗೆಲುವು ದೊರೆತಿದೆ. ಮಾಲ್ಡೀವ್ಸ್ ನಲ್ಲಿ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಭಾರತ ಮತ್ತು ಚೀನಾದ ನೀತಿಗಳ ಮೇಲೆ ನಿಗಾ ಇರಿಸಿರುವ ಮುಯಿಝುಗೆ ಈ ಚುನಾವಣೆಯು ಅತ್ಯಂತ ಮಹತ್ವದ್ದಾಗಿತ್ತು. ಇದೀಗ ಚುನಾವಣೆಯ ಗೆಲುವಿನೊಂದಿಗೆ ಮುಯಿಝುಗೆ ಇನ್ನಷ್ಟು ಬಲ ಬಂದಂತಾಗಿದೆ.
ಮೂಲಗಳ ಪ್ರಕಾರ, 86 ಸ್ಥಾನಗಳ ಪೈಕಿ ಪಿಎನ್ ಸಿ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಕೇವಲ 12 ಸ್ಥಾನಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದಿದ್ದಾರೆ. ಉಳಿದ ಸ್ಥಾನಗಳು ಬೇರೆ ಪಕ್ಷಗಳ ಪಾಲಾಗಿದೆ ಎಂದು ತಿಳಿದುಬಂದಿದೆ.