ಕುಂದಾಪುರ: ತೆಗೆದು ಹಾಕಲಾದ ಸಿಲೆಬಸ್ ಗಳಿಂದ ಪ್ರಶ್ನೆಗಳನ್ನು ನೀಡುವ ಮೂಲಕ ಈ ಬಾರಿ ಸಿಇಟಿ ಪರೀಕ್ಷೆ ನಡೆಸಿ ಮಕ್ಕಳನ್ನು ಗೊಂದಲಕ್ಕೆ ದೂಡಲಾಗಿದ್ದು ತಕ್ಷಣವೇ ಪರೀಕ್ಷೆ ರದ್ಧುಪಡಿಸಬೇಕು ಮತ್ತು ಪುನರ್ ಪರೀಕ್ಷೆ ನಡೆಸಬೇಕು. ಜೊತೆಗೆ ತಪ್ಪಿತಸ್ಥ ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಬೇಕು ಎಂದು ಜೆಡಿಎಸ್ ಮುಖಂಡ, ವಿಧಾನಪರಿಷತ್ ಸದಸ್ಯ ಭೋಜೇಗೌಡ ಆಗ್ರಹಿಸಿದ್ದಾರೆ.
ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಮಂಡಳಿ (ಕೆಇಎ) ನಡೆಸುವ ಪ್ರವೇಶ ಪರೀಕ್ಷೆ ಸಿಇಟಿ ಯಲ್ಲಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ನಾಲ್ಕು ಪರೀಕ್ಷೆಗಳಲ್ಲಿ ಅಂದರೆ ಜೀವಶಾಸ್ತ್ರ ಮತ್ತು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಕೇಳಲಾಗಿರುವ 45ಕ್ಕಿಂತ ಹೆಚ್ಚು ಪಶ್ನೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪಠ್ಯ ಪುಸ್ತಕದಿಂದ ತೆಗೆದು ಹಾಕಿರುವ ಅಧ್ಯಾಯದಿಂದ ಕೇಳುವ ಮೂಲಕ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಮಾನ್ಯವಾಗಿ ಸಿಇಟಿ ಪರೀಕ್ಷೆಯ ಸಿಲೆಬಸ್ ನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಭಾಗಕ್ಕೆ ಅಳವಡಿಸಿರುವ ಪಠ್ಯದ ವಿಷಯಗಳನ್ನೇ ಒಳಗೊಂಡಿರುತ್ತದೆ. ಹಾಗಾಗಿ ಕರ್ನಾಟಕ ಪಿಯು ಬೋರ್ಡ್ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಯಾವ ಸಿಲೆಬಸ್ ನೀಡುತ್ತದೋ ಅದರ ಆಧಾರದ ಮೇಲೆ ಕೆಇಎ ಸಿಇಟಿಯಲ್ಲಿ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಬೇಕು ಎಂದಿರುವ ಭೋಜೇಗೌಡ, ಕೆಇಎ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಗೊಂದಲಗಳಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಯು ಬೋರ್ಡ್ ವೆಬ್ಸೈಟ್ ನಲ್ಲಿ ಕಡಿತಗೊಂಡ ಪಠ್ಯಕ್ರಮಗಳನ್ನು ಪ್ರಕಟಿಸಿದ್ದಾರೆ ಅದರಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯ ವಿಷಯಗಳು ಇವೆ, ಆದರೆ ಇದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಡಿತಗೊಂಡ ಪಠ್ಯಕ್ರಮವನ್ನು ಸಹಾ ಅಳವಡಿಸಿ ಪ್ರಶ್ನೆಪತ್ರಿಕೆಯನ್ನು ತಯಾರಿಸಿದ್ದಾರೆ ಅಥವಾ ಕಳೆದ ವರ್ಷದ ಪ್ರಶ್ನೆಪತ್ರಿಕೆಯನ್ನು ಈ ವರ್ಷ ಪರೀಕ್ಷೆಯಲ್ಲಿ ಶೇ. 45 ರಷ್ಟು ಪ್ರಶ್ನೆಗಳ ಬಗ್ಗೆ ಕೆಇಎ ತಕ್ಷಣವೇ ಸ್ಪಷ್ಟಿಕರಣ ನೀಡಬೇಕು. ಇದು ಕೆಇ ಇಲಾಖೆ ಹಾಗೂ ಸರಕಾರದ ಕರ್ತವ್ಯ ಎಂದಿರುವ ಭೋಜೇಗೌಡ, ಸರ್ಕಾರ ತಕ್ಷಣ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಜೊತೆಗೆ ಸಿಲೆಬಸ್ ನಲ್ಲಿರುವ ಪಠ್ಯಗಳನ್ನು ಆಧರಿಸಿ ಪುನರ್ ಪರೀಕ್ಷೆಗೆ ದಿನಾಂಕ ನಿಗಧಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.