ಇಂದು ಮನೆ ಮನೆ ಪ್ರಚಾರ, ಮತದಾನಕ್ಕೆ ಒಂದೇ ದಿನ ಬಾಕಿ

ಬೆಂಗಳೂರು: ಏಪ್ರಿಲ್ 19ರಂದು ದೇಶದ ಮೊದಲ ಹಂತದ ಮತದಾನ ನಡೆದಿದ್ದು, ಇದೀಗ ಎರಡನೇ (ರಾಜ್ಯದ ಮೊದಲ ಹಂತದ ಚುನಾವಣೆ) ಹಂತದ ಮತದಾನಕ್ಕೆ ಒಂದೇ ದಿನ ಬಾಕಿ ಇದೆ. ನಾಳೆಯ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರೆ, ಪೋಲಿಂಗ್ ಅಧಿಕಾರಿಗಳು ಇವಿಎಂ ಯಂತ್ರಗಳು ಹದಿನಾಲ್ಕು ಮತಕ್ಷೇತ್ರಗಳಿಗೆ ಈಗಾಗಲೇ ರವಾನೆಯಾಗಿವೆ. ಇದಕ್ಕಾಗಿ ಬಿಎಂಟಿಸಿಯ ಒಂದು ಸಾವಿರ ಬಸ್ ಗಳು ಸೇರಿದಂತೆ ಕೆಎಸ್ ಆರ್ ಟಿಸಿಯ ಎರಡು ಸಾವಿರ ಬಸ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ರಾಜ್ಯದ ಮೂವತ್ತು ಸಾವಿರದಷ್ಟಿರುವ ಮತಗಟ್ಟೆಗಳ ಸುತ್ತಮುತ್ತ ಬಿಗಿ ಬದ್ರತೆಯನ್ನು ಕೈಗೊಳ್ಳಲಾಗಿದ್ದು, ಐವತ್ತು ಸಾವಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ 65 ಪ್ಯಾರಾ ಮಿಲಿಟರಿ ಪಡೆ, ಸಿಎಆರ್ ಪೊಲೀಸ್ ತುಕಡಿಗಳನ್ನು ಚುನಾವಣಾ ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಬಿಸಿಲಿನ ತಾಪದಿಂದ ರಕ್ಷಣೆಗಾಗಿ ನೆರಳಿನ ವ್ಯವಸ್ಥೆ ಸೇರಿದಂತೆ‌ ಅಗತ್ಯ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿಕಲಾಂಗ ಚೇತನರು ಮತ್ತು ವಯಸ್ಸಾದ ಮತದಾರರನ್ನು ಮತಗಟಗಟೆಗಳಿಗೆ ಕರೆತರಲು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಸನ್ ಸ್ಟ್ರೋಕ್ ನಿಂದ ತೊಂದರೆ ಸೇರಿ ಮತ್ತಿತರ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಕಂಡು ಬಂದರೆ ಅಂಥವರಿಗೆ ಕೂಡಲೇ ಚಿಕಿತ್ಸೆ ಕೊಡಿಸಲು ಪ್ರಥಮ ಚಿಕಿತ್ಸೆ, ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಜಾಗ ಖಾಲಿ ಮಾಡಬೇಕು: ಮತದಾನಕ್ಕೆ ನಲವತ್ತೆಂಟು ಗಂಟೆಗಳಿಗೂ ಮುಂಚೆಯೇ ಮತಕ್ಷೇತ್ರಗಳಿಗೆ ಸಂಬಂಧಪಡದವರು ಆಯಾ ಮತಕ್ಷೇತ್ರಗಳನ್ನು ಖಾಲಿ ಮಾಡಬೇಕು. 144 ಸೆಕ್ಷನ್ ಜಾರಿ, ಮದ್ಯ ಮಾರಾಟ ಬಂದ್: ಬಹಿರಂಗ ಪ್ರಚಾರಕ್ಕೆ ನಿನ್ನೆಯೇ ತೆರೆ ಬಿದ್ದಿದ್ದು ಬೆಂಗಳೂರು ಸೇರಿದಂತೆ‌ ರಾಜ್ಯದ ಮೊದಲ ಹಂತದಲ್ಲಿ ಚುನಾವಣೆ ನಡೆಯುವ ಹದಿನಾಲ್ಕು ಮತಕ್ಷೇತ್ರಗಳಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, ನಿಷೇಧಾಜ್ಞೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆ ಪ್ರಚಾರ ನಡೆಸಲು ಹತ್ತು ಜನರಿಗಿಂತ ಹೆಚ್ಚು ಜನರು ಇರುವಂತಿಲ್ಲ. ಅಭ್ಯರ್ಥಿಯೂ ಸೇರಿದಂತೆ ಮೂರು ವಾಹನಗಳುಗಿಂತ ಹೆಚ್ಚು ವಾಹನಗಳನ್ನು ಬಳಸುವಂತಿಲ್ಲ. ವಾಹನದಲ್ಲಿ ಚಾಲಕರೂ ಸೇರಿ ಮೂವರಿಗಿಂತ ಹೆಚ್ಚು ಮಂದಿ ಪ್ರಯಾಣಿಸುವಂತಿಲ್ಲ. ಇನ್ನು ನಿನ್ನೆ ಸಾಯಂಕಾಲ ಆರು ಗಂಟೆಯಿಂದಲೇ ಚುನಾವಣೆ ನಡೆಯಲಿರುವ ಹದಿನಾಲ್ಕು ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸರಬರಾಜನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ಏ.24ರ ಸಂಜೆ ಆರರಿಂದ ಏ.26ರ ಮಧ್ಯ ರಾತ್ರಿ 12ರ ವರೆಗೆ ಮದ್ಯ ಮಾರಾಟ, ತಯಾರಿ, ಸರಬರಾಜನ್ನು ನಿಷೇಧಿಸಲಾಗಿದೆ. ಶಾಲಾ-ಕಾಲೇಜು, ಬ್ಯಾಂಕ್ ಗಳಿಗೆ ರಜೆ: ನಾಳೆ ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಮತದಾನ ನಡೆಯಲಿದ್ದು, ಬಸ್ಸು, ರೈಲು ಸೇರಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಶಾಲಾ ಕಾಲೇಜು, ಬ್ಯಾಂಕ್, ವಾಣಿಜ್ಯ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಮತದಾನಕ್ಕೆ ಅಗತ್ಯ ಅನುವು ಮಾಡಿಕೊಡಬೇಕಿದೆ. ಐಟಿ ಉದ್ದಿಮೆಗಳವರು ಮತದಾನದ ದಿನ ರಜೆ ನೀಡಬೇಕೆಂದು ಈಗಾಗಲೇ ಸೂಚಿಸಲಾಗಿದೆ. ಯಾವ ಕ್ಷೇತ್ರಗಳಿಗೆ ಮತದಾನ? ಬೆಂಗಳೂರು ಕೇಂದ್ರ ಬೆಂಗಳೂರು ಉತ್ತರ ಬೆಂಗಳೂರು ದಕ್ಷಿಣ ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ ಉಡುಪಿ-ಚಿಕ್ಕಮಗಳೂರು ತುಮಕೂರು ಚಾಮರಾಜನಗರ ಮೈಸೂರು ಮಂಡ್ಯ ಹಾಸನ ದಕ್ಷಿಣ ಕನ್ನಡ ಚಿತ್ರದುರ್ಗ ಹದಿನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ 14, ಬಿಜೆಪಿಯ 11, ಜೆಡಿಎಸ್ ನಿಂದ 3 ಅಭ್ಯರ್ಥಿಗಳು ಸೇರಿದಂತೆ ಒಟ್ಟು 247 ಮಂದಿ ಹುರಿಯಾಳುಗಳು ಸ್ಪರ್ಧಾ ಕಣದಲ್ಲಿದ್ದಾರೆ. ಈ ಪೈಕಿ 226 ಮಂದಿ ಪುರುಷ, 21 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಇನ್ನು ಏ.19 ರಂದು ಇಪ್ಪತ್ತೊಂದು ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿತ್ತು. ನಾಳೆ ಕರ್ನಾಟಕವೂ ಸೇರಿದಂತೆ ಇತರ ಹದಿಮೂರು ರಾಜ್ಯಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement